News

ಈದ್ ಮಿಲಾದ್: ನಗರದಲ್ಲಿ ಸಂಭ್ರಮದ ಮೆರವಣಿಗೆ, ಸಾಮೂಹಿಕ ಪ್ರಾರ್ಥನೆ

sidlaghatta eid milad 2026 celebration procession

Sidlaghatta : ಇಸ್ಲಾಂ ಧರ್ಮದ ಕೊನೆಯ ಪ್ರವಾದಿ ಹಜರತ್ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಆಚರಿಸಲಾಗುವ ಈದ್ ಮಿಲಾದ್ ಹಬ್ಬವನ್ನು ಬುಧವಾರ ನಗರದಾದ್ಯಂತ ಮುಸಲ್ಮಾನ ಬಾಂಧವರು ಸಂಭ್ರಮದಿಂದ ಆಚರಿಸಿದರು.

ಹಬ್ಬದ ಅಂಗವಾಗಿ ನಗರದ ಪ್ರಮುಖ ಮಸೀದಿಗಳು, ದರ್ಗಾಗಳು ಹಾಗೂ ಬಡಾವಣೆಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಬೆಳಗ್ಗೆಯಿಂದಲೇ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ, ಧಾರ್ಮಿಕ ಉಪನ್ಯಾಸ ಹಾಗೂ ಮೌಲಿದ್ ಪಾರಾಯಣಗಳು ನಡೆದವು. ಬಳಿಕ ವಿವಿಧ ಬಡಾವಣೆಗಳ ಪ್ರಮುಖ ಮಸೀದಿಗಳಿಂದ ಮುಸ್ಲಿಂ ಬಾಂಧವರು ಮೆರವಣಿಗೆಯಲ್ಲಿ ತೆರಳಿ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಮೆರವಣಿಗೆಯಲ್ಲಿ ಮಕ್ಕಳು, ಯುವಕರು ಹಾಗೂ ಹಿರಿಯರು ಪಾಲ್ಗೊಂಡಿದ್ದರು. ಪ್ರವಾದಿ ಮುಹಮ್ಮದ್ ಅವರ ಜೀವನ ಸಂದೇಶಗಳನ್ನು ಸಾರುವ ಘೋಷಣೆಗಳು, ನಾತ್ ಹಾಗೂ ಕವ್ವಾಲಿ ಗೀತೆಗಳು ಮೆರವಣಿಗೆಯುದ್ದಕ್ಕೂ ಮೊಳಗಿದವು. ಮೆಕ್ಕಾ ಮತ್ತು ಮದೀನಾ ನಗರಗಳ ಸ್ಥಬ್ಧಚಿತ್ರಗಳು ಹಾಗೂ ಧಾರ್ಮಿಕ ಸಂದೇಶಗಳನ್ನು ಒಳಗೊಂಡ ಅಲಂಕಾರಿಕ ಪ್ರದರ್ಶನಗಳು ಸಾರ್ವಜನಿಕರ ಗಮನ ಸೆಳೆದವು.

ರಬಿವುಲ್ ಅವ್ವಲ್ ತಿಂಗಳಲ್ಲಿ ಬರುವ ಈದ್ ಮಿಲಾದ್ ಪ್ರಯುಕ್ತ ಮಸೀದಿಗಳಲ್ಲಿ ಒಂದು ತಿಂಗಳ ಕಾಲ ಮೌಲಿದ್ ಪಾರಾಯಣ ಹಾಗೂ ಪ್ರವಾದಿ ಮುಹಮ್ಮದ್ ಅವರ ಜೀವನ, ಆದರ್ಶ ಮತ್ತು ಮಾನವೀಯ ಸಂದೇಶಗಳ ಕುರಿತು ಧಾರ್ಮಿಕ ಪ್ರವಚನಗಳನ್ನು ಆಯೋಜಿಸಲಾಗುತ್ತಿದೆ.

ಹಬ್ಬದ ಪ್ರಯುಕ್ತ ಮನೆಗಳಲ್ಲಿ ಮಹಿಳೆಯರು ವಿವಿಧ ಬಗೆಯ ಸಿಹಿ ತಿಂಡಿಗಳನ್ನು ತಯಾರಿಸಿ ನೆರೆಹೊರೆಯವರು ಹಾಗೂ ಬಂಧು-ಮಿತ್ರರೊಂದಿಗೆ ಹಂಚಿಕೊಂಡರು. ಮಕ್ಕಳು ಮತ್ತು ಯುವಕರು ಹೊಸ ಉಡುಪುಗಳನ್ನು ಧರಿಸಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಹಲವು ಕಡೆ ಬಡವರಿಗೆ ಆಹಾರ, ಬಟ್ಟೆ ಹಾಗೂ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು. ಮಸೀದಿ ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ಅನ್ನಸಂತರ್ಪಣೆಯೂ ನಡೆಯಿತು.

ಸೌಹಾರ್ದದ ಸಂದೇಶ

ಈದ್ ಮಿಲಾದ್ ಆಚರಣೆಯು ಕೇವಲ ಧಾರ್ಮಿಕ ಹಬ್ಬವಾಗದೆ, ಪರಸ್ಪರ ಪ್ರೀತಿ, ಸಹೋದರತೆ, ಮಾನವೀಯತೆ ಹಾಗೂ ಪರಧರ್ಮ ಸಹಿಷ್ಣುತೆಯ ಸಂದೇಶವನ್ನು ಸಾರುತ್ತದೆ. ನಗರದ ವಿವಿಧ ಸಮುದಾಯದ ಜನರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದು, ಸಾಮಾಜಿಕ ಸೌಹಾರ್ದಕ್ಕೆ ಸಾಕ್ಷಿಯಾಯಿತು.

“ಪ್ರವಾದಿ ಮುಹಮ್ಮದ್ ಅವರು ಬಡವರು, ನಿರ್ಗತಿಕರು ಹಾಗೂ ಹಸಿದವರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಈದ್ ಮಿಲಾದ್ ಆಚರಣೆಯ ಪ್ರಮುಖ ಉದ್ದೇಶವಾಗಿದೆ. ಹಬ್ಬದ ಸಂದರ್ಭದಲ್ಲಿ ಉಳ್ಳವರು ಬಡವರಿಗೆ ನೆರವು ನೀಡುವುದು, ಅನ್ನದಾನ ಮಾಡುವುದು ಹಾಗೂ ಅಗತ್ಯ ವಸ್ತುಗಳನ್ನು ವಿತರಿಸುವ ಸಂಪ್ರದಾಯ ಮುಂದುವರಿದಿದೆ,” ಎಂದು ಮೆಹಬೂಬ್ ಪಾಷ ತಿಳಿಸಿದರು.

“ಮಿಲಾದ್ ಎಂದರೆ ಜನನ. ಪ್ರವಾದಿ ಮುಹಮ್ಮದ್ ಅವರ ಜನ್ಮದಿನವನ್ನು ಸಂತಸ ಮತ್ತು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ. ಮನೆ ಮತ್ತು ಮಸೀದಿಗಳ ಅಲಂಕಾರ, ಪ್ರಾರ್ಥನೆ, ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಸಮಾಜದ ಎಲ್ಲ ವರ್ಗದವರಿಗೂ ಪ್ರೀತಿ ಮತ್ತು ಸಹೋದರತೆಯ ಸಂದೇಶ ನೀಡುವುದು ಹಬ್ಬದ ವಿಶೇಷತೆಯಾಗಿದೆ. ಮದರಸಾ ಮಕ್ಕಳಿಗೆ ಹಾಗೂ ಬಡ ಕುಟುಂಬಗಳಿಗೆ ಬಟ್ಟೆ ಮತ್ತು ಇತರ ನೆರವು ನೀಡುವ ಕಾರ್ಯಗಳೂ ನಡೆಯುತ್ತವೆ,” ಎಂದು ಅವರು ಹೇಳಿದರು.

ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಯಾವುದೇ ಭೇದಭಾವವಿಲ್ಲದೆ ಮಾನವೀಯ ಮೌಲ್ಯಗಳನ್ನು ಗೌರವಿಸಿ, ಶಾಂತಿ ಮತ್ತು ಸಹಬಾಳ್ವೆಯ ಮಾರ್ಗದಲ್ಲಿ ಸಾಗಬೇಕು ಎಂಬ ಸಂದೇಶವನ್ನು ಈದ್ ಮಿಲಾದ್ ಹಬ್ಬ ಸಾರಿತು.

ಹಬ್ಬಕ್ಕೂ ಮುನ್ನ ನಗರದಲ್ಲಿ ಶಾಂತಿ ಕಾಪಾಡಲು ಪೊಲೀಸರು ಪಥಸಂಚಲನ ನಡೆಸಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

More

Share
error: Content is protected !!