News

ಬೆಳಗಿನ ಬಸ್ ಕೊರತೆ: ವಿದ್ಯಾರ್ಥಿಗಳ ಪರದಾಟ, ಹೆಚ್ಚುವರಿ ಬಸ್ ಓಡಿಸಲು ಒತ್ತಾಯ

Students crowd a KSRTC bus in the morning, Sidlaghatta

Sidlaghatta : ಶಿಡ್ಲಘಟ್ಟದಿಂದ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರಿಗೆ ಬೆಳಗಿನ ಸಮಯದಲ್ಲಿ ಸಂಚರಿಸುವ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಮರ್ಪಕ ಬಸ್‌ ಗಳಿಲ್ಲದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ನಿಗದಿತ ಸಮಯಕ್ಕೆ ಶಾಲೆ-ಕಾಲೇಜು ತಲುಪಬೇಕಾದ ವಿದ್ಯಾರ್ಥಿಗಳು ಜನದಟ್ಟಣೆಯಿಂದ ತುಂಬಿ ತುಳುಕುವ ಬಸ್‌ ಗಳಲ್ಲಿ ಪ್ರಯಾಣಿಸುವ ಅನಿವಾರ್ಯತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗಿನ ಪೀಕ್‌ ಅವಧಿಯಲ್ಲಿ ಹೆಚ್ಚುವರಿ ಬಸ್‌ ಗಳನ್ನು ಓಡಿಸುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ಶಿಡ್ಲಘಟ್ಟದಿಂದ ಚಿಕ್ಕಬಳ್ಳಾಪುರಕ್ಕೆ ಪ್ರತಿದಿನ ನೂರಾರು ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಪ್ರಯಾಣಿಸುತ್ತಾರೆ. ಅದರಲ್ಲೂ ಬೆಳಿಗ್ಗೆ ಶಾಲಾ-ಕಾಲೇಜುಗಳು ಆರಂಭವಾಗುವ ಸಮಯದಲ್ಲಿ ಬಸ್‌ ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವುದರಿಂದ ಬಸ್‌ಗಳು ನಿಗದಿತ ನಿಲ್ದಾಣಗಳಿಗೆ ತಲುಪುವಷ್ಟರಲ್ಲಿ ತುಂಬಿರುತ್ತವೆ. ಇದರಿಂದ ಮುಂದಿನ ನಿಲ್ದಾಣಗಳಲ್ಲಿ ಕಾಯುವ ವಿದ್ಯಾರ್ಥಿಗಳಿಗೆ ಬಸ್‌ ಹತ್ತಲೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಚಿಕ್ಕಬಳ್ಳಾಪುರ ಮಾತ್ರವಲ್ಲದೆ ಬೆಂಗಳೂರಿಗೆ ತೆರಳುವ ಮಾರ್ಗದಲ್ಲಿಯೂ ಇದೇ ರೀತಿಯ ಸಮಸ್ಯೆಯನ್ನು ಕೆಲವು ವಿದ್ಯಾರ್ಥಿಗಳು ಎದುರಿಸುತ್ತಿದ್ದಾರೆ. ಪ್ರತಿದಿನ ಬಸ್‌ ಗಳನ್ನು ಅವಲಂಬಿಸಿ ವಿದ್ಯಾಭ್ಯಾಸಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ತರಗತಿಗಳಿಗೆ ಹಾಜರಾಗುವುದು ಸವಾಲಾಗಿ ಪರಿಣಮಿಸಿದೆ.

ಬಸ್‌ ಹತ್ತಲೂ ಜಾಗವಿಲ್ಲ; ಅಪಘಾತದ ಆತಂಕ

ಬಸ್‌ ಗಳಲ್ಲಿ ಆಸನಗಳು ಭರ್ತಿಯಾಗುವುದಷ್ಟೇ ಅಲ್ಲದೆ, ನಿಂತುಕೊಂಡು ಪ್ರಯಾಣಿಸಲು ಕೂಡ ಜಾಗವಿಲ್ಲದಷ್ಟು ಜನದಟ್ಟಣೆ ಇರುತ್ತದೆ ಎಂಬುದು ವಿದ್ಯಾರ್ಥಿಗಳ ಅಳಲು. ಇತ್ತೀಚೆಗೆ ಬಸ್‌ ಹತ್ತಲು ಇನ್ನಷ್ಟು ವಿದ್ಯಾರ್ಥಿಗಳು ಕಾಯುತ್ತಿದ್ದ ಸಂದರ್ಭದಲ್ಲಿಯೇ ಬಸ್‌ ತುಂಬಿದ್ದರಿಂದ ಚಾಲಕರು ಬಸ್‌ ನಿಲ್ಲಿಸದೆ ಮುಂದಕ್ಕೆ ಚಲಿಸಿದ ಘಟನೆ ನಡೆದಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಈ ರೀತಿಯ ಪರಿಸ್ಥಿತಿಯಲ್ಲಿ ಬಸ್‌ ಹತ್ತಲು ಪ್ರಯತ್ನಿಸುವಾಗ ವಿದ್ಯಾರ್ಥಿಗಳು ಆಯತಪ್ಪಿ ಕೆಳಗೆ ಬೀಳುವ ಅಥವಾ ಅಪಘಾತಕ್ಕೆ ಸಿಲುಕುವ ಅಪಾಯವಿದೆ. ವಿಶೇಷವಾಗಿ ಪ್ರತಿದಿನ ಪ್ರಯಾಣಿಸಬೇಕಾದ ಶಾಲಾ-ಕಾಲೇಜು ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಸಾರಿಗೆ ಇಲಾಖೆ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ತಾಲ್ಲೂಕಿನ ವಿವಿಧ ಭಾಗಗಳಿಂದ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಹೊರಗಡೆಗೆ ತೆರಳಿ ಶಿಕ್ಷಣ ಪಡೆಯುತ್ತಿದ್ದಾರೆ. ಇಂತಹ ವಿದ್ಯಾರ್ಥಿನಿಯರು ಪ್ರತಿದಿನ ಬಸ್‌ ಪ್ರಯಾಣವನ್ನೇ ಅವಲಂಬಿಸಿರುವುದರಿಂದ, ಬೆಳಗಿನ ಸಮಯದಲ್ಲಿ ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸುವುದು ಅತ್ಯಗತ್ಯವಾಗಿದೆ.

ಹೆಚ್ಚುವರಿ ಬಸ್‌ ಬಿಡುವಂತೆ ವಿದ್ಯಾರ್ಥಿಗಳ ಒತ್ತಾಯ

ಶಾಲಾ-ಕಾಲೇಜುಗಳಿಗೆ ತೆರಳುವ ಸಮಯದಲ್ಲಿ ಬಸ್‌ ಗಳ ಸಂಖ್ಯೆ ಹೆಚ್ಚಿಸಬೇಕು. ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆಗೆ ಇಳಿಸಬೇಕು. ವಿದ್ಯಾರ್ಥಿಗಳು ಸುರಕ್ಷಿತವಾಗಿ ಪ್ರಯಾಣಿಸಲು ಅಗತ್ಯ ವ್ಯವಸ್ಥೆ ಕಲ್ಪಿಸಬೇಕು ಎಂದು ವಿದ್ಯಾರ್ಥಿಗಳಾದ ದಿನೇಶ್‌ ಮತ್ತು ಪವಿತ್ರ ಒತ್ತಾಯಿಸಿದ್ದಾರೆ.

ಪ್ರತಿದಿನ ತರಗತಿಗಳಿಗೆ ತೆರಳುವ ವಿದ್ಯಾರ್ಥಿಗಳು ಬಸ್‌ ಗಾಗಿ ಕಾಯುತ್ತಾ ಸಮಯ ಕಳೆಯುವಂತಾಗಿದೆ. ಕೆಲವೊಮ್ಮೆ ಬಸ್‌ ಗಳಲ್ಲಿ ಹತ್ತಲು ಸಾಧ್ಯವಾಗದ ಕಾರಣ ಮುಂದಿನ ಬಸ್‌ ಗಾಗಿ ಕಾಯಬೇಕಾಗುತ್ತದೆ. ಇದರಿಂದ ತರಗತಿಗಳಿಗೆ ತಡವಾಗಿ ತಲುಪುವ ಆತಂಕವೂ ಎದುರಾಗಿದೆ. ಆದ್ದರಿಂದ ಬೆಳಗಿನ ಸಮಯದಲ್ಲಿ ವಿದ್ಯಾರ್ಥಿಗಳ ಪ್ರಯಾಣದ ಒತ್ತಡವನ್ನು ಗಮನದಲ್ಲಿಟ್ಟುಕೊಂಡು ಹೆಚ್ಚುವರಿ ಬಸ್‌ ಗಳನ್ನು ಓಡಿಸಬೇಕು ಎಂಬುದು ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಯಾಗಿದೆ.

ಅಧಿಕಾರಿಗಳ ಗಮನಕ್ಕೆ ತಂದರೆ ಹೆಚ್ಚುವರಿ ಬಸ್‌ ವ್ಯವಸ್ಥೆ

ವಿದ್ಯಾರ್ಥಿಗಳ ಸಮಸ್ಯೆಯ ಕುರಿತು ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕ ಜಿ.ಪಿ. ಜಗನ್ನಾಥ್ ಅವರನ್ನು ಸಂಪರ್ಕಿಸಿದಾಗ, ಹಬ್ಬದ ಸಂದರ್ಭದಲ್ಲಿ ಹೆಚ್ಚುವರಿ ಬಸ್‌ ಗಳನ್ನು ಕಾರ್ಯಾಚರಣೆಗೆ ಇಳಿಸಿದ್ದರಿಂದ ಕೆಲವು ಸಂದರ್ಭಗಳಲ್ಲಿ ತೊಂದರೆ ಉಂಟಾಗಿತ್ತು ಎಂದು ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರದಿಂದ ಬರಬೇಕಾದ ಸಂಪರ್ಕ ಸಾರಿಗೆ ಬಸ್‌ ಬಾರದಿದ್ದರೆ ಅಥವಾ ವಿದ್ಯಾರ್ಥಿಗಳಿಗೆ ಬಸ್‌ ಗಳ ಕೊರತೆ ಎದುರಾದರೆ, ಅದನ್ನು ತಕ್ಷಣ ಡಿಪೋ ವ್ಯವಸ್ಥಾಪಕರ ಗಮನಕ್ಕೆ ತರಬೇಕು. ಸಮಸ್ಯೆ ತಿಳಿಸಿದ ಕೂಡಲೇ ಹೆಚ್ಚುವರಿ ಬಸ್‌ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

ಬೆಳಿಗ್ಗೆ ಸಮಯದಲ್ಲಿ ಚಿಕ್ಕಬಳ್ಳಾಪುರಕ್ಕೆ ತೆರಳಲು ಸಾಧ್ಯವಾದಷ್ಟು ಬಸ್‌ ಗಳ ವ್ಯವಸ್ಥೆ ಮಾಡಲಾಗಿದೆ. ಕೆಲವು ದೂರದ ಮಾರ್ಗದ ಬಸ್‌ ಗಳಲ್ಲಿ ಮಾತ್ರ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳಲು ಸಾಧ್ಯವಾಗದ ಸಂದರ್ಭಗಳಿರಬಹುದು. ಉಳಿದಂತೆ ವಿದ್ಯಾರ್ಥಿಗಳ ಪ್ರಯಾಣಕ್ಕೆ ಅಗತ್ಯ ವ್ಯವಸ್ಥೆ ಇದೆ ಎಂದು ಅವರು ತಿಳಿಸಿದ್ದಾರೆ.

ಪ್ರತಿದಿನ ಸಾವಿರಾರು ಪ್ರಯಾಣಿಕರು

ಶಿಡ್ಲಘಟ್ಟ ಘಟಕದಿಂದ ಪ್ರತಿದಿನ ಸರಾಸರಿ 600 ಮಂದಿ ಚಿಕ್ಕಬಳ್ಳಾಪುರಕ್ಕೆ ಪ್ರಯಾಣಿಸುತ್ತಾರೆ. ಬೆಂಗಳೂರಿಗೆ ಸುಮಾರು 3,000ರಿಂದ 3,500 ಮಂದಿ ಸಂಚರಿಸುತ್ತಾರೆ. ವಿವಿಧ ಮಾರ್ಗಗಳಲ್ಲಿ ಸಂಚರಿಸಲು ಶಿಡ್ಲಘಟ್ಟ ಡಿಪೋದಿಂದ ಪ್ರತಿದಿನ 33 ಬಸ್‌ ಗಳನ್ನು ಕಾರ್ಯಾಚರಣೆಗೆ ಬಿಡಲಾಗುತ್ತಿದೆ ಎಂದು ಘಟಕ ವ್ಯವಸ್ಥಾಪಕ ಜಿ.ಪಿ. ಜಗನ್ನಾಥ್ ಮಾಹಿತಿ ನೀಡಿದ್ದಾರೆ.

ಸಂಬಂಧಿತ ಸುದ್ದಿ: ಬೆಳಗಿನ ಬಸ್ ಸೌಲಭ್ಯಕ್ಕೆ ಆಗ್ರಹಿಸಿ ಕೆಎಸ್‌ಆರ್‌ಟಿಸಿ ಬಸ್ ತಡೆದು ಪ್ರತಿಭಟನೆ

Sidlaghatta WhatsApp Channel Group

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

More

Share
error: Content is protected !!