ವಿಜಿಲೆನ್ಸ್ ಜಾಗೃತಿ ಸಪ್ತಾಹ: ಮಹಿಳಾ ಸ್ವಸಹಾಯ ಸಂಘಗಳಿಗೆ ಬ್ಯಾಂಕಿಂಗ್ ವಂಚನೆ ಎಚ್ಚರಿಕೆ

Sidlaghatta : ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಹಾಗೂ ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಪಾರದರ್ಶಕತೆ ಕಾಪಾಡುವ ಉದ್ದೇಶದಿಂದ ಕೆನರಾ ಬ್ಯಾಂಕ್ ವತಿಯಿಂದ ಭಕ್ತರಹಳ್ಳಿಯಲ್ಲಿ ವಿಜಿಲೆನ್ಸ್ ಜಾಗೃತಿ ಕಾರ್ಯಕ್ರಮವನ್ನು ಶನಿವಾರ ಆಯೋಜಿಸಲಾಗಿತ್ತು.
ಕೇಂದ್ರೀಯ ಜಾಗೃತಿ ಆಯೋಗದ ನಿರ್ದೇಶನದಂತೆ ಅ. 26ರಿಂದ ನ. 1ರವರೆಗೆ ಆಚರಿಸಲಾಗುತ್ತಿರುವ ವಿಜಿಲೆನ್ಸ್ ಜಾಗೃತಿ ಸಪ್ತಾಹದ ಅಂಗವಾಗಿ ಭಕ್ತರಹಳ್ಳಿಯ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಮಹಿಳಾ ಸ್ವಸಹಾಯ ಸಂಘಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಕೆನರಾ ಬ್ಯಾಂಕ್ ನ ಕೋಲಾರ ಪ್ರಾದೇಶಿಕ ಕಚೇರಿಯ ಅಧಿಕಾರಿ ರವಿಶಂಕರ್ ರೆಡ್ಡಿ ಮಾತನಾಡಿ, ಈ ವರ್ಷದ ಜಾಗೃತಿ ಸಪ್ತಾಹವನ್ನು “ಸತ್ಯನಿಷ್ಠೆಯಿಂದ ಸಮೃದ್ಧಿ” ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಸ್ಮರಣಾರ್ಥ ಪ್ರತಿ ವರ್ಷ ವಿಜಿಲೆನ್ಸ್ ಜಾಗೃತಿ ಸಪ್ತಾಹ ಆಚರಿಸಲಾಗುತ್ತದೆ. ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಹಾಗೂ ಜವಾಬ್ದಾರಿಯುತ ಆಡಳಿತ ವ್ಯವಸ್ಥೆ ಮತ್ತು ಸಮಾಜ ನಿರ್ಮಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಭಕ್ತರಹಳ್ಳಿ ಕೆನರಾ ಬ್ಯಾಂಕ್ ಶಾಖೆಯ ವ್ಯವಸ್ಥಾಪಕಿ ತನಿಕೆಲ್ಲಾ ವಸಂತಾ ಮಾತನಾಡಿ, ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಬ್ಯಾಂಕ್ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಮಹಿಳಾ ಸ್ವಸಹಾಯ ಸಂಘಗಳು ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು. ಉಳಿತಾಯ ಮತ್ತು ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಪ್ರಾಮಾಣಿಕತೆ ಕಾಪಾಡುವುದರ ಜತೆಗೆ ಭ್ರಷ್ಟಾಚಾರಕ್ಕೆ ಅವಕಾಶ ನೀಡಬಾರದು. ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವುದು ಹಾಗೂ ನೈತಿಕ ಮೌಲ್ಯಗಳನ್ನು ಪಾಲಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದರು.
ಬೆಂಗಳೂರು ವೃತ್ತದ ವಿಜಿಲೆನ್ಸ್ ಅಧಿಕಾರಿ ಕೆ. ವಿನೋದ್ ಕುಮಾರ್ ಮಾತನಾಡಿ, ಭ್ರಷ್ಟಾಚಾರ ನಿಯಂತ್ರಣದಲ್ಲಿ ಕೇಂದ್ರೀಯ ಜಾಗೃತಿ ಆಯೋಗದ ಪಾತ್ರ ಹಾಗೂ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಪಾಡಲು ಕೆನರಾ ಬ್ಯಾಂಕ್ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಡಿಜಿಟಲ್ ವಹಿವಾಟು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆನ್ ಲೈನ್ ವಂಚನೆ, ನಕಲಿ ಕರೆಗಳು, ವಂಚನೆಯ ಲಿಂಕ್ ಗಳು ಹಾಗೂ ಒಟಿಪಿ ಹಂಚಿಕೆಯಿಂದ ಉಂಟಾಗುವ ಅಪಾಯಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಅಪರಿಚಿತ ಲಿಂಕ್ ಗಳನ್ನು ಕ್ಲಿಕ್ ಮಾಡಬಾರದು ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳಬಾರದು ಎಂದು ಮಹಿಳೆಯರಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಆಯೋಜಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಬೆಂಗಳೂರು ವೃತ್ತದ ವಿಜಿಲೆನ್ಸ್ ಅಧಿಕಾರಿ ನರಸಿಂಹಮೂರ್ತಿ ಸೇರಿದಂತೆ ಗ್ರಾಮದ 50ಕ್ಕೂ ಹೆಚ್ಚು ಮಹಿಳಾ ಸ್ವಸಹಾಯ ಸಂಘಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಸಂಬಂಧಿತ ಸುದ್ದಿ: ಬ್ಯಾಂಕ್ ಗ್ರಾಹಕರಿಗೆ ಸೈಬರ್ ವಂಚಕರ ಬಗ್ಗೆ ಅರಿವು

For Daily Updates WhatsApp ‘HI’ to 7406303366
Summary in English
As part of Vigilance Awareness Week (26 October to 1 November), Canara Bank held a vigilance awareness programme on Saturday at the Dr. B.R. Ambedkar community hall in Bhaktarahalli, attended by representatives of over 50 women self-help groups. Bank officials spoke on corruption-free, transparent banking and the Central Vigilance Commission’s role, and vigilance officer K. Vinod Kumar warned women about online fraud, fake calls, phishing links and sharing OTPs (one-time passwords) or bank account details. A rangoli competition was also held.
Be a reporter
ಊರಿನ ಸುದ್ದಿ, ಫೋಟೋ ಕಳುಹಿಸಿ.
Send news


