ಮಕ್ಕಳ ಓದಿಗೆ ಶಾಂತ ವಾತಾವರಣ, TV–ಮೊಬೈಲ್ ನಿಯಂತ್ರಣ: ಪೋಷಕರ ಸಭೆಯಲ್ಲಿ ಸಲಹೆ

Sidlaghatta : ಮಕ್ಕಳ ಓದಿಗೆ ಮನೆಯಲ್ಲಿ ಶಾಂತಿಯುತ ವಾತಾವರಣ ಕಲ್ಪಿಸುವುದರ ಜತೆಗೆ, ಟಿ.ವಿ. ಮತ್ತು ಮೊಬೈಲ್ ಬಳಕೆಯನ್ನು ನಿಯಂತ್ರಿಸಿ, ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಪೌಷ್ಟಿಕ ಆಹಾರ ನೀಡುವ ಮೂಲಕ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಬೇಕು ಎಂದು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಸರೋಜ ಎಸ್.ಎಂ. ಹೇಳಿದರು.
ತಾಲ್ಲೂಕಿನ ಮೇಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಮುದಾಯದತ್ತ ಶಾಲೆ ಕಾರ್ಯಕ್ರಮ ಹಾಗೂ ಪೋಷಕರ ಸಭೆಯಲ್ಲಿ ಅವರು ಮಾತನಾಡಿದರು.
ಮಕ್ಕಳನ್ನು ಇತರರೊಂದಿಗೆ ಹೋಲಿಕೆ ಮಾಡದೆ, ಅವರ ಸಾಮರ್ಥ್ಯಕ್ಕೆ ತಕ್ಕಂತೆ ಪ್ರೋತ್ಸಾಹಿಸಬೇಕು. ಪೋಷಕರು ಶಿಕ್ಷಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮಕ್ಕಳ ಕಲಿಕೆಯ ಪ್ರಗತಿಯ ಬಗ್ಗೆ ಮಾಹಿತಿ ಪಡೆಯಬೇಕು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಸಾಧಿಸಲು ಶಾಲೆಯ ವತಿಯಿಂದ ವಿಶೇಷ ತರಗತಿಗಳು ಹಾಗೂ ಅಗತ್ಯ ಮಾರ್ಗದರ್ಶನ ನೀಡಲಾಗುವುದು. ಶಾಲೆಯ ಅಭಿವೃದ್ಧಿಗೆ ಪೋಷಕರ ಸಹಕಾರ ಅತ್ಯಗತ್ಯ ಎಂದರು.
ಮುಖ್ಯಶಿಕ್ಷಕ ಎಚ್.ಎಂ. ಭಾಸ್ಕರ್ ಮಾತನಾಡಿ, ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಶಿಕ್ಷಕರಷ್ಟೇ ಪೋಷಕರ ಪಾತ್ರವೂ ಮಹತ್ವದ್ದಾಗಿದೆ. ಮುಂಬರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳನ್ನು ಈಗಿನಿಂದಲೇ ಸಜ್ಜುಗೊಳಿಸಬೇಕು ಎಂದು ಹೇಳಿದರು.
ಪಠ್ಯಪುಸ್ತಕಗಳ ಜತೆಗೆ ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡಿಸಬೇಕು. ಪ್ರತಿದಿನ ನಿಗದಿತ ವೇಳಾಪಟ್ಟಿಯಂತೆ ಓದಲು ಪ್ರೇರೇಪಿಸಬೇಕು. ಕಠಿಣ ವಿಷಯಗಳ ಅಭ್ಯಾಸಕ್ಕೆ ಹೆಚ್ಚಿನ ಸಮಯ ಮೀಸಲಿಡುವಂತೆ ನೋಡಿಕೊಳ್ಳಬೇಕು. ಶಿಕ್ಷಕರು ನೀಡುವ ಟಿಪ್ಪಣಿಗಳನ್ನು ಕ್ರಮಬದ್ಧವಾಗಿ ಬರೆದುಕೊಳ್ಳಲು ಹಾಗೂ ಪರೀಕ್ಷಾ ಭಯವಿಲ್ಲದೆ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಲು ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದು ಪೋಷಕರಿಗೆ ಸಲಹೆ ನೀಡಿದರು.
ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸಂಪತ್, ಶಿಕ್ಷಕರಾದ ಸುಜಾತ ಸಿ., ಗಾಯತ್ರಿ ಎಂ., ಸವಿತಾ ಜಿ., ದೇವಮ್ಮ ಎಂ.ಟಿ., ತುಳಸಿಮಾಲ ಸಿ., ಪದ್ಮ ಟಿ., ವೆಂಕಟಶಿವಾರೆಡ್ಡಿ ಬಿ.ಎಂ., ನಾಗರಾಜ ಎಂ., ನಾರಾಯಣಸ್ವಾಮಿ ವಿ. ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಜರಿದ್ದರು.
ಸಂಬಂಧಿತ ಸುದ್ದಿ: ಮೇಲೂರು ಶಾಲೆಯ ಬಿಸಿಯೂಟ ನೌಕರರಿಗೆ ಗೌರಿ ಗಣೇಶ ಹಬ್ಬದ ಬಾಗಿನ ಪ್ರದಾನ

For Daily Updates WhatsApp ‘HI’ to 7406303366
Summary in English
At the Samudayadatta Shale (school-to-community) programme and parents’ meeting on Friday at the Government High School in Melur, School Development and Monitoring Committee president Saroja S.M. urged parents to provide a peaceful home environment for study, limit TV and mobile use and give nutritious food. Headmaster H.M. Bhaskar advised parents to prepare children for the upcoming SSLC (Secondary School Leaving Certificate) exam by practising previous years’ question papers and following a daily study schedule.
Be a reporter
ಊರಿನ ಸುದ್ದಿ, ಫೋಟೋ ಕಳುಹಿಸಿ.
Send news


