ವಿವಿಧ ಇಲಾಖೆಗಳ ಸಹಯೋಗದಲ್ಲಿ ಮತ್ತು ಪರಿಶ್ರಮದಿಂದಾಗಿ ತಾಲ್ಲೂಕಿನಾದ್ಯಂತ ಒಟ್ಟಾರೆ ಶೇ 86 ರಷ್ಟು ಎರಡನೇ ಡೋಸ್ ಲಸಿಕೆಯನ್ನು ಹಾಕಿಸಲಾಗಿದೆ. 15-18 ವರ್ಷದ ಶೇ 90 ರಷ್ಟು ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ಹಾಕಿಸಿದ್ದೇವೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ತಿಳಿಸಿದರು.
ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ಕೋವಿಡ್-19 ಮುನ್ನೆಚ್ಚರಿಕೆ ಡೋಸ್ ಲಸಿಕಾಕರಣಕ್ಕೆ ಶಾಸಕ ವಿ.ಮುನಿಯಪ್ಪ ಚಾಲನೆ ನೀಡಿದ ನಂತರ ಅವರು ಮಾಹಿತಿ ನೀಡಿದರು.
ಎರಡನೇ ಡೋಸ್ ಲಸಿಕೆ ಪಡೆದ 9 ತಿಂಗಳು ಅಥವಾ 39 ವಾರಗಳನ್ನು ಪೂರೈಸಿರುವವರು ಮಾತ್ರ ಮುನ್ನೆಚ್ಚರಿಕೆ ಡೋಸ್ ಲಸಿಕೆ ಪಡೆಯಲು ಅರ್ಹರಾಗಿದ್ದು, ಈ ಮೊದಲೆರಡು ಡೋಸ್‌ಗಳಲ್ಲಿ ಪಡೆದಿರುವ ಲಸಿಕೆಯನ್ನೇ ಮುನ್ನೆಚ್ಚರಿಕೆ ಡೋಸ್ ಲಸಿಕೆಯಾಗಿ ನೀಡಲಾಗುತ್ತಿದೆ. ಈ ರೀತಿ ಎರಡನೇ ಡೋಸ್ ಲಸಿಕೆ ಪಡೆದು 9 ತಿಂಗಳು ಪೂರೈಸಿರುವವರ ಪಟ್ಟಿಯನ್ನು ಆರೋಗ್ಯ ಇಲಾಖೆ ತಯಾರಿಸಿದ್ದು, ಅದರಂತೆ ಎಲ್ಲರಿಗೂ ಕರೆ ಮಾಡಿ ಹಾಗೂ ಎಸ್ಎಂಎಸ್ ಕಳುಹಿಸುವ ಮೂಲಕ ಮುನ್ನೆಚ್ಚರಿಕೆ ಲಸಿಕೆ ಪಡೆಯುವಂತೆ ಸೂಚನೆ ನೀಡುತ್ತಿದೆ ಎಂದರು.
ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರಾದ ಪೌರ ಕಾರ್ಮಿಕರು, ಪೊಲೀಸರು, ಕಂದಾಯ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಪಿಡಿಒ ಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆಲ್ಲಾ ಕೋವಿಡ್-19 ಮುನ್ನೆಚ್ಚರಿಕೆ ಡೋಸ್ ಲಸಿಕಾಕರಣಕ್ಕೆ ಚಾಲನೆ ನೀಡಲಾಗಿದೆ. ಎರಡನೇ ಡೋಸ್ ಲಸಿಕೆ ಪಡೆದು 9 ತಿಂಗಳು ಪೂರೈಸಿರುವ 60 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಲಾಗುತ್ತಿದೆ ಎಂದು ಹೇಳಿದರು.
ಶಾಸಕ ವಿ.ಮುನಿಯಪ್ಪ ಮಾತನಾಡಿ, ದೇಶದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುವುದರ ಜೊತೆಗೆ ಓಮಿಕ್ರಾನ್ ಕೂಡ ಹೆಚ್ಚಾಗುತ್ತಿದ್ದು, ಸಾರ್ವಜನಿಕರಲ್ಲಿ ಮತ್ತೆ ಭೀತಿಯನ್ನು ಉಂಟುಮಾಡುತ್ತಿದೆ. ಈ ನಡುವೆಯೇ ಈಗಾಗಲೇ ಎರಡು ಡೋಸ್ ಪಡೆದ 60 ವರ್ಷ ದಾಟಿದ ಅನಾರೋಗ್ಯ ಪೀಡಿತರು, ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ಲಸಿಕೆ ಅಭಿಯಾನ ಇಂದಿನಿಂದ ಆರಂಭವಾಗಿದೆ. ಮುನ್ನೆಚ್ಚರಿಕೆಯೊಂದೇ ನಮ್ಮಲ್ಲಿರುವ ಅಸ್ತ್ರ ಎಂದು ನುಡಿದರು.
ತಹಶೀಲ್ದಾರ್ ಬಿ.ಎಸ್.ರಾಜೀವ್ ಮಾತನಾಡಿ, 1420 ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರಿಗೆ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಈ ದಿನ ಕೋವಿಡ್-19 ಮುನ್ನೆಚ್ಚರಿಕೆ ಡೋಸ್ ಲಸಿಕೆ ನೀಡುತ್ತಿದ್ದೇವೆ. ಅದರೊಂದಿಗೆ 11 ಸಾವಿರ ಮಂದಿ ಎರಡನೇ ಡೋಸ್ ಲಸಿಕೆ ಪಡೆಯದಿರುವವರಿಗೂ ಲಸಿಕೆ ಹಾಕುತ್ತಿದ್ದೇವೆ. ಒಟ್ಟಾರೆ ಶೇ 100 ರಷ್ಟು ಲಸಿಕೆ ಹಾಕಿಸುವುದು ನಮ್ಮ ಗುರಿ ಎಂದು ಹೇಳಿದರು.
ನಗರಸಭೆ ಪೌರಾಯುಕ್ತ ಆರ್.ಶ್ರೀಕಾಂತ್ ಮಾತನಾಡಿ, ಪೌರಕಾರ್ಮಿಕರು ಹಾಗೂ ನೀರು ಸರಬರಾಜು ಸಿಬ್ಬಂದಿಗಳಲ್ಲಿ ಎರಡನೇ ಡೋಸ್ ಲಸಿಕೆ ಪಡೆದು 9 ತಿಂಗಳು ಪೂರೈಸಿರುವ ಎಲ್ಲರಿಗೂ ಮುನ್ನೆಚ್ಚರಿಕೆ ಡೋಸ್ ನೀಡಲಾಗುತ್ತಿದೆ. ನಗರದಲ್ಲಿ ಎರಡನೇ ಡೋಸ್ ಲಸಿಕೆ ಪಡೆಯದಿರುವವರನ್ನು ಗುರುತಿಸಿ ಮಂಗಳವಾರ ಸಂಜೆಯೊಳಗೆ ಹಾಕಿಸಲಾಗುವುದು ಎಂದರು.