Handiganala, Sidlaghatta : ಹೆಣ್ಣು ಕುಟುಂಬದ ಕಣ್ಣು, ರೈತರನ್ನು ಪೊರೆವ ಭೂತಾಯಿ, ದೇಶದ ಪ್ರಥಮ ಪ್ರಜೆ, ಪ್ರಕೃತಿಯ ಮಾತೆಯಾಗಿ ಸ್ತ್ರೀ ಗೌರವಿಸಲ್ಪಡುವ ಸಮಾಜದಲ್ಲಿ ಹೆಣ್ಣುಮಕ್ಕಳ ಸ್ಥಾನವನ್ನು ಉತ್ತೇಜಿಸುವ ಕಾರ್ಯ ನಡೆಯಬೇಕಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ತಾಲ್ಲೂಕಿನ ಹಂಡಿಗನಾಳದ ಬಾಲಾಜಿ ಕಲ್ಯಾಣಮಂಟಪದಲ್ಲಿ ತಾಲ್ಲೂಕು ಪಂಚಾಯಿತಿ, ತಾಲ್ಲೂಕು ಸ್ವೀಪ್ ಸಮಿತಿ, ಫೌಂಡೇಶನ್ ಫಾರ್ ಇಕಾಲಾಜಿಕಲ್ ಸೆಕ್ಯುರಿಟಿ ಸಂಸ್ಥೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಮತದಾನದ ಜಾಗೃತಿ ಮೂಡಿಸುವ ಪ್ರಜಾಪ್ರಭುತ್ವ ಹಬ್ಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೆಣ್ಣು ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಹೆಣ್ಣುಮಕ್ಕಳಿಗೆ ಎಲ್ಲರಂತೆ ಸಮಾನ ಅವಕಾಶಗಳನ್ನು ನೀಡುವುದು, ಹೆಣ್ಣು ಮಗುವಿಗೆ ಬೆಂಬಲ ನೀಡುವುದು, ಲಿಂಗ ಆಧರಿತ ತಾರತಮ್ಯಗಳನ್ನು ತೊಡೆದುಹಾಕುವುದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಉದ್ದೇಶವಾಗಿದೆ. ಹೆಣ್ಣು ಮಗು ಎದುರಿಸುವ ಅಸಮಾನತೆಗಳ ಬಗ್ಗೆ ಜಾಗೃತಿ ಮೂಡಿಸುವುದು, ಅವರ ಶಿಕ್ಷಣದ ಬಗ್ಗೆ ಜನರಿಗೆ ಅರಿವು ಮೂಡಿಸುವುದು, ಮೂಲಭೂತವಾಗಿ ಎಲ್ಲರಂತೆ ಅವರನ್ನು ಗೌರವಿಸವುದು, ಹೆಣ್ಣು ಮಗುವಿನ ಬಗ್ಗೆ ಹೊಸ ದೃಷ್ಟಿಕೋನವನ್ನು ನೀಡುವುದು ಈ ದಿನದ ಇನ್ನೊಂದು ಉದ್ದೇಶವಾಗಿದೆ. ಹೆಣ್ಣು ಮಕ್ಕಳ ಬಗೆಗಿನ ಸಮಾಜದ ಮನೋಭಾವ ಬದಲಾಯಿಸುವುದು, ಹೆಣ್ಣು ಭ್ರೂಣ ಹತ್ಯೆ ನಿಯಂತ್ರಣಕ್ಕೆ ತರುವುದು ಮತ್ತು ಕಡಿಮೆಯಾಗುತ್ತಿರುವ ಲಿಂಗಾನುಪಾತದ ಬಗ್ಗೆ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಗುರಿಯಾಗಿದೆ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಇಒ ಜಿ.ಮುನಿರಾಜು, ಕಳೆದ ಚುನಾವಣೆಯಲ್ಲಿ ದಾಖಲೆ ಮತದಾನ ಮಾಡುವ ಮೂಲಕ ಶಿಡ್ಲಘಟ್ಟ ಕ್ಷೇತ್ರದ ಜನರು ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಿದ್ದರು. ಮತದಾನ ನಮ್ಮ ಹಕ್ಕು ಹಾಗೂ ಪವಿತ್ರ ಕರ್ತವ್ಯ. ಈ ಹಕ್ಕನ್ನು ಪ್ರತಿಯೊಬ್ಬರು ಚಲಾಯಿಸುವ ಮೂಲಕ ಸುಭದ್ರ ಪ್ರಜಾಪ್ರಭುತ್ವ ಕಟ್ಟೊಣ. ಯಾರು ಕೂಡ ಮತದಾನದ ಅವಕಾಶದಿಂದ ವಂಚಿತರಾಗಬೇಡಿ ಎಂದು ಹೇಳಿದರು.
ಗಮನ ಮಹಿಳಾ ಸಮೂಹ ಸಂಸ್ಥೆ ಸಮನ್ವಯಾಧಿಕಾರಿ ಶಾಂತಮ್ಮ ಮುಖ್ಯ ಭಾಷಣಕಾರರಾಗಿ ಆಗಮಿಸಿ, ಹೆಣ್ಣುಮಕ್ಕಳು ಮತ್ತು ಮಹಿಳೆಯರ ಸಬಲೀಕರಣ ಕುರಿತು ಮಾತನಾಡಿದರು. ಮಹಿಳೆಯರು ಸ್ವತಂತ್ರ ನಿರ್ಧಾರಗಳನ್ನು ತಾಲ್ಲೂಕು ವ್ಯಾಪ್ತಿಯ 110 ಮಂದಿ ಗರ್ಭಿಣಿಯರಿಗೆ ಅರಿಶಿನ, ಕುಂಕುಮ ಕೊಟ್ಟು, ಸೀರೆ, ಕುಂಕುಮದ ಬಟ್ಟಲನ್ನು ನೀಡಿ ಸೀಮಂತ ಕಾರ್ಯಕ್ರಮವನ್ನು ಮಾಡಲಾಯಿತು. ಸಂವಿಧಾನದ ಮತದಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾ ನಿರ್ದೇಶಕಿ ಧನುರೇಣುಕ, ತಾಲ್ಲೂಕು ಪಂಚಾಯಿತಿ ಇಒ ಜಿ. ಮುನಿರಾಜ, ತಹಶೀಲ್ದಾರ್ ಬಿ.ಎನ್.ಸ್ವಾಮಿ, ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಸಿ.ಡಿ.ಪಿ.ಒ ನವತಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಮೇಲೂರು ಮಂಜುನಾಥ್, ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ರಾಜ್ಯ ಖಜಾಂಚಿ ಶಶಿಕಲಾ, ಬಂಕ್ ಮುನಿಯಪ್ಪ, ವಿಜಯೇಂದ್ರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ್, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಎಫ್.ಇ.ಎಸ್ ಸಂಸ್ಥೆಯ ಶ್ರಿರಂಗ ಹೆಗ್ಡೆ, ನಿಕಾತ್ ಪರ್ವಿನ್, ರಮೇಶ್ ಹಾಜರಿದ್ದರು.