ಶಿಡ್ಲಘಟ್ಟ ತಾಲ್ಲೂಕಿನ ಮಳಮಾಚನಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಹೊಸ ಕಳೆ ಬಂದಿದೆ. ಈ ಶಾಲೆಯ ಗೋಡೆಗಳ ಮೇಲೆ ರಚಿಸಿರುವ ಬಣ್ಣ ಬಣ್ಣದ ವಿನೂತನ ಶೈಲಿಯ ಚಿತ್ರಗಳಿಂದ ನೋಡುಗರ ಮನಸೆಳೆಯುವಂತಾಗಿದೆ. ಇದಕ್ಕೆ ಕಾರಣರಾದವರು “ಹೊಂಗಿರಣ” ತಂಡದ ಮಹಿಳೆಯರು.
ಮಳಮಾಚನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಆವರಣ, ಸುತ್ತ ಮುತ್ತ ಸ್ವಚ್ಛಗೊಳಿಸಿದ್ದಾರೆ. ಕಳೆಗಿಡಗಳನ್ನೆಲ್ಲಾ ತೆಗೆಯಲಾಗಿದೆ. ಶಾಲೆಯ ಗೋಡೆಗಳ ಮೇಲೆ ವರ್ಲಿಯ ಪ್ರೇರಣೆಯಿಂದ, ಜಾಮಿತಿಕ ನಕ್ಷೆಗಳು, ವಿಜ್ಞಾನ, ಪರಿಸರ, ಶಿಕ್ಷಣ, ಕ್ರೀಡೆ, ಬಿಸಿಯೂಟ, ಸೈಕಲ್ ವಿತರಣೆ ಮೊದಲಾದ ಸರ್ಕಾರಿ ಯೋಜನೆಗಳು, ಕಂಪ್ಯೂಟರ್ ಮುಂತಾದವುಗಳಿರುವ ಸುಂದರ ಚಿತ್ರಗಳನ್ನು ರಚಿಸಲಾಗಿದೆ.
ಗ್ರಾಮಾಂತರ ಟ್ರಸ್ಟ್ ಮೂಲಕ ಸಿಟ್ರಿಕ್ಸ್ ಆರ್ ಅಂಡ್ ಡಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ಹಣಕಾಸಿನ ನೆರವನ್ನು ಪಡೆದು, “ಹೊಂಗಿರಣ” ತಂಡದ 11 ಮಂದಿ ಮಹಿಳೆಯರು ಆಗಮಿಸಿ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
“ನಾವುಗಳು ಗ್ರಾಮಾಂತರ ಟ್ರಸ್ಟ್ ಸಹಯೋಗದಲ್ಲಿ ಮಳಮಾಚನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಗೋಡೆಗಳಿಗೆ ಬಣ್ಣ ಬಳಿದಿದ್ದೇವೆ. ಅದರ ಮೇಲೆ ಚಿತ್ರಗಳನ್ನು ರಚಿಸುತ್ತಿದ್ದೇವೆ. ಬೆಂಗಳೂರಿನಲ್ಲಿ ಹಲವು ಶಾಲೆಗಳಲ್ಲಿ ಈ ರೀತಿಯ ಚಟುವಟಿಕೆ ನಡೆಸಿದ್ದೇವೆ. ಕಲೆ, ಪರಿಸರ, ಶಿಕ್ಷಣ ಕುರಿತಂತೆ ಕಾಳಜಿ ವಹಿಸುವ ಸಮಾನಮನಸ್ಕ ಮಹಿಳಾ ತಂಡ ನಮ್ಮದು” ಎಂದು “ಹೊಂಗಿರಣ” ತಂಡದ ಸಾಂಘವಿ ಮತ್ತು ಮಧುರಾ ತಿಳಿಸಿದರು.
“ಶಾಲೆಯ ಗೋಡೆಯನ್ನು ವರ್ಲಿಯ ರೂಪಾಂತರದಿಂದ, ಜಾಮಿತಿಕ ನಕ್ಷೆಗಳು, ರೇಖಾ ಚಿತ್ರಗಳು, ವಿಜ್ಞಾನ, ಪರಿಸರ, ಶಿಕ್ಷಣ, ಕ್ರೀಡೆ ಮೊದಲಾದ ಚಿತ್ರಗಳಿಂದ ಚಂದಗೊಳಿಸಲು ಬೆಂಗಳೂರಿನಿಂದ “ಹೊಂಗಿರಣ” ತಂಡದ ಮಹಿಳೆಯರು ಶ್ರಮಿಸಿದ್ದಾರೆ. ಬಣ್ಣ ಮತ್ತಿತರ ಅಗತ್ಯ ವಸ್ತುಗಳನ್ನು ಖರೀದಿಸಲು ಸಿಟ್ರಿಕ್ಸ್ ಆರ್ ಅಂಡ್ ಡಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪೆನಿ ನೆರವಾಗಿದೆ” ಎಂದು ಗ್ರಾಮಾಂತರ ಟ್ರಸ್ಟ್ ವ್ಯವಸ್ಥಾಪಕ ಟ್ರಸ್ಟೀ ಉಷಾ ಶೆಟ್ಟಿ ಹೇಳಿದರು.
“ನಮ್ಮ ಶಾಲೆಯ ಮತ್ತು ಮಕ್ಕಳ ಅದೃಷ್ಟವಿದು. ಸಿಟ್ರಿಕ್ಸ್ ಕಂಪೆನಿಯ ನೆರವು ಹಾಗೂ “ಹೊಂಗಿರಣ” ತಂಡದ ಮಹಿಳೆಯರು ಆಸಕ್ತಿಯಿಂದ ತಮ್ಮ ಶ್ರಮ, ಸಮಯ ಮತ್ತು ಕಲೆಯನ್ನು ಸರ್ಕಾರಿ ಶಾಲೆಗೆ ಮೀಸಲಿಟ್ಟು ನಮ್ಮ ಶಾಲೆಯನ್ನು ಸ್ವಚ್ಛಗೊಳಿಸಿ, ಸಿಂಗರಿಸಿದ್ದಾರೆ. ಇವರನ್ನು ಕರೆತಂದ ಗ್ರಾಮಾಂತರ ಟ್ರಸ್ಟ್ ಅವರಿಗೂ ನಾವು ಋಣಿಗಳು” ಎಂದು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಸಾವಿತ್ರಿದೇವಿ ತಿಳಿಸಿದರು.