Sidlaghatta : ವಿಶ್ವಕರ್ಮ ಸಮಾಜವು ಭವ್ಯ ಪರಂಪರೆಯುಳ್ಳ ಸಮಾಜ. ವಾಸ್ತು ಶಿಲ್ಪವನ್ನು ಬಲ್ಲವರು. ಮನೆ, ದೇವಾಲಗಳ ನಿರ್ಮಾಣದಲ್ಲಿ ವಿಶ್ವಕರ್ಮ ಸಮಾಜದ ಕೈಚಳಕವಿದೆ. ಪ್ರತಿಯೊಂದು ಕಲೆಯಲ್ಲೂ ವಿಶ್ವಕರ್ಮ ಸಮಾಜದ ಅವಿಸ್ಮರಣೀಯ ಕೊಡುಗೆಯಿದೆ ಎಂದು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷ ಅಮರನಾರಾಯಣಚಾರಿ ತಿಳಿಸಿದರು.
ಶಿಡ್ಲಘಟ್ಟ ನಗರದ ನಗರ್ತ ಪೇಟೆಯಲ್ಲಿರುವ ಶ್ರೀ ಕಾಳಿಕಾಂಭ ಕಮಠೇಶ್ವರ ಸಮುದಾಯ ಭವನದಲ್ಲಿ ಭಾನುವಾರ ತಾಲ್ಲೂಕಿನ ವಿಶ್ವಕರ್ಮ ಕುಲಬಾಂಧವರಿಂದ ಆಯೋಜಿಸಿದ್ದ ವಿಶ್ವಕರ್ಮ ಜಯಂತ್ಯುತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರತಿನಿತ್ಯ ಜನರು ಬಳಸುವ ಕರಕುಶಲ ಸಾಮಗ್ರಿಗಳು, ಲೋಹ, ಕಬ್ಬಿಣ, ದೇವರ ವಿಗ್ರಹ, ಚಿತ್ರಪಟಗಳು, ಗೃಹಬಳಕೆ ವಸ್ತುಗಳು, ಸ್ಮಾರಕಗಳ ನಿರ್ಮಾಣದ ಕಾರ್ಯದಲ್ಲಿ ವಿಶ್ವಕರ್ಮರ ಕಲೆಯ ಜೀವಂತಿಕೆಯ ಅಸ್ತಿತ್ವವನ್ನು ಇಂದಿಗೂ ಉಳಿಸಿರುವುದೇ ಸಾಕ್ಷಿ. ಲೋಕವನ್ನು ವೈಭವೀಕರಿಸುವ ಸಾಂಸ್ಕೃತಿಕ ಪರಂಪರೆ, ಕಲೆ ಮತ್ತು ವಾಸ್ತಶಿಲ್ಪ ಕ್ಷೇತ್ರಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ ಎಂದರು.
ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕರಾದ ಎನ್.ನಾಗವೇಣಿ ಹಾಗೂ ಬಿ.ವಿ.ಮಂಜುನಾಥ ಸೇರಿದಂತೆ ಸಮುದಾಯದ 19 ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ವೈಷ್ಣವಿ ಎಂಬ ಎಂಟು ವರ್ಷದ ಹೆಣ್ಣು ಮಗು ಭಗವದ್ಗೀತೆಯನ್ನು ಪಠಿಸಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದಳು.
ಕಾಳಿಕಾಂಭ ಕಮಟೇಶ್ವರ ದೇವಾಲಯ ಟ್ರಸ್ಟ್ ಅಧ್ಯಕ್ಷ ಮುನಿರತ್ನಚಾರಿ, ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಗೌರವಾಧ್ಯಕ್ಷ ಜನಾರ್ಧನ ಮೂರ್ತಿ, ಕಾರ್ಯದರ್ಶಿ ಶ್ರೀನಾಥ್ ನಿರ್ದೇಶಕರುಗಳಾದ ಸುಂದರ ಚಾರಿ, ಮಂಜುನಾಥ್ ,ಜಗದೀಶ್, ಮೋಹನ್, ಗೌರೀಶ್, ಶಿವ ಶಂಕರಾಚಾರಿ, ಶರತ್, ಮಂಜುಳಾ ಜಗದೀಶ್, ಚಂದ್ರಶೇಖರ್, ಛಾಯಾ ರಮೇಶ್, ನಂದಿ ರಾಜೇಶ್, ಶರತ್, ತಾಲ್ಲೂಕಿನ ವಿಶ್ವಕರ್ಮ ಸಮಾಜದ ಕುಲಬಾಂಧವರು ಹಾಜರಿದ್ದರು.
ತಾಲ್ಲೂಕು ಆಡಳಿತದಿಂದ ಆಚರಣೆ
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದಿಂದ ವಿಶ್ವಕರ್ಮ ಜಯಂತ್ಯುತ್ಸವವನ್ನು ಆಚರಿಸಲಾಯಿತು. ಶಾಸಕ ಬಿ.ಎನ್.ರವಿಕುಮಾರ್, ತಹಶೀಲ್ದಾರ್ ಬಿ.ಎನ್.ಸ್ವಾಮಿ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದರು.