Sidlaghatta : ಶಿಡ್ಲಘಟ್ಟ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಶ್ರೀ ಶಾರದಾ ವಿದ್ಯಾ ಸಂಸ್ಥೆ ಹಾಗೂ ಎ.ಆರ್.ಎಂ.ಪಿಯು ಕಾಲೇಜಿನ ಸಹಯೋಗದೊಂದಿಗೆ ನಗರದ ಶ್ರೀ ಶಾರದಾ ವಿದ್ಯಾ ಸಂಸ್ಥೆ ಆವರಣದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ವಿಜ್ಞಾನಿ ದಿ. ಹರೀಶ್. ಆರ್. ಭಟ್ ನೆನಪಿನಲ್ಲಿ “ವಿಜ್ಞಾನ ಉತ್ಸವ 2024” ವನ್ನು ಆಚರಿಸಲಾಯಿತು.
ವಿಜ್ಞಾನಿ ದಿ. ಹರೀಶ್. ಆರ್. ಭಟ್ ಭಾವಚಿತ್ರಕ್ಕೆ ಗಣ್ಯರಿಂದ ಪುಷ್ಪ ನಮನ ಸಲ್ಲಿಸಲಾಯಿತು .
ವಿಜ್ಞಾನಿ ಡಾ.ಗುರುಪ್ರಸಾದ್ ರೋಬೋಟ್ ಗೆ ಚಾಲನೆ ನೀಡುವ ಮೂಲಕ ಹರೀಶ್. ಆರ್. ಭಟ್ ಸೈನ್ಸ್ ಕ್ಲಬ್ ಗೆ ಚಾಲನೆ ನೀಡಿ ಮಾತನಾಡಿ, ವಿಜ್ಞಾನ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ವ್ಯವಸ್ಥಿತವಾಗಿ ಅಧ್ಯಯನ ಮಾಡುವುದೇ ವಿಜ್ಞಾನ. ವಿಜ್ಞಾನ ಪ್ರಶ್ನೆ ಮಾಡುವುದನ್ನು ಕಲಿಸುತ್ತದೆ ಎಂದರು.
ಶಿಡ್ಲಘಟ್ಟ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯದ ಜೊತೆಗೆ ವಿಜ್ಞಾನ ಕ್ಷೇತ್ರದಲ್ಲಿ ಸಹ ಕೆಲಸ ಮಾಡುತ್ತಿರುವುದು ಪ್ರಶಂಸನೀಯ ಎಂದರು.
ವಿದ್ಯಾರ್ಥಿಗಳು ವ್ಯಾಸಂಗದ ಅವಧಿಯಲ್ಲಿಯೇ ವಿಜ್ಞಾನ ಕ್ಷೇತ್ರದಲ್ಲಿ ಆಸಕ್ತಿ ಬೆಳಸಿಕೊಳ್ಳಬೇಕು. ಹಲವಾರು ಪ್ರಯೋಗಗಳನ್ನು ಆಸಕ್ತಿಯಿಂದ ಮಾಡುತ್ತಿದ್ದಲ್ಲಿ ಮುಂದಿನ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು.
ಪ್ರತಿಯೊಂದು ಭಾಷೆಯವರು ತಮ್ಮದೇ ಆದ ವಿನ್ಯಾಸವನ್ನು ಸಿದ್ದಪಡಿಸಿ ಅದನ್ನು ಇಂಗ್ಲೀಷ್ ಕೀಲಿಮಣೆಗೆ ಅಳವಡಿಸಿದ್ದಾರೆ. ಆದರೆ ಕ – ನಾದ ಕೀಲಿ ಮಣೆಯಲ್ಲಿ ಭಾರತದ ಯಾವುದೇ ಭಾಷೆಯನ್ನು ಬೇಕಿದ್ದರೂ ಟಂಕಿಸಬಹುದು ಎಂದರು.
ಪ್ರಾಂಶುಪಾಲ ಡಾ.ಕೆ.ಮೂರ್ತಿ ಸಾಮ್ರಾಟ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿಜ್ಞಾನ ಉತ್ಸವ 2024 ರ ಧ್ಯೇಯವನ್ನು ತಿಳಿಸಿದರು.
ಕಸಾಪ ಅಧ್ಯಕ್ಷ ಬಿ.ಆರ್. ಅನಂತಕೃಷ್ಣ ಮಾತನಾಡಿ, ಕನ್ನಡ ಅನ್ನ ನೀಡುವ ಭಾಷೆ ಅಲ್ಲ ಎಂಬ ಮಾತನ್ನು ಸುಳ್ಳಾಗಿಸಿ, ಭಾರತೀಯ ಭಾಷೆಗೆ ತಂತ್ರ್ಜ್ಞಾನದ ಸ್ಪರ್ಶ ನೀಡುವ ಮೂಲಕ ಅದನ್ನು ಅನ್ನ ನೀಡುವ ಭಾಷೆಯಾಗಿ ಪರಿವರ್ತಿಸುವ ಪಣ ತೊಟ್ಟು ವಿಜ್ಞಾನಿ ಡಾ.ಗುರುಪ್ರಸಾದ್ ಅವರು, ಕ ನಾದ ಎಂಬ ಕೀಲಿಮಣೆಯನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ವಿವರಿಸಿದರು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ.ಆರ್.ಮುನಿರತ್ನಂ ,ಕಸಾಪ ಜಿಲ್ಲಾಧ್ಯಕ್ಷ ಡಾ.ಕೋಡಿರಂಗಪ್ಪ , ಗೌ.ಕಾರ್ಯದರ್ಶಿ ಅಮೃತ್ ಕುಮಾರ್, ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ನಿ.ಪೂ.ಅದ್ಯಕ್ಷ ಎ.ಎಂ.ತ್ಯಾಗರಾಜ್, ಶ್ರೀ ಶಾರದಾ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಶ್ರೀಕಾಂತ್, ಎ.ಆರ್.ಎಂ.ಪಿಯು ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಮೂರ್ತಿ ಸಾಮ್ರಾಟ್, ಜೆಡಿಎಸ್ ಮುಖಂಡ ಬಿ.ಎನ್.ಸಚಿನ್ , ಆರ್.ಎ.ಉಮೇಶ್, ಗೋಪಾಲ್, ಉಪನ್ಯಾಸಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.