ತಾಲ್ಲೂಕಿನ ವರದನಾಯಕನಹಳ್ಳಿಯ ಅತ್ಯಂತ ಪುರಾತನ ದೇವಿಯರಾದ ಶ್ರೀಪಟಾಲಮ್ಮದೇವಿ ಮತ್ತು ಶ್ರೀ ವೀರಸೊಣ್ಣಮ್ಮದೇವಿಯರ ಶಿಲಾ ಪ್ರತಿಷ್ಠಾಪನೆ ಹಾಗೂ ನೂತನ ದೇವಾಲಯ ಜೀರ್ಣೋದ್ಧಾರದ ಪೂಜಾ ಕಾರ್ಯಕ್ರಮವನ್ನು ಬುಧವಾರದಿಂದ ಶುಕ್ರವಾರದವರೆಗೂ ಶ್ರದ್ಧಾಭಕ್ತಿಯಿಂದ ನೆರವೇರಿಸಲಾಗುತ್ತಿದೆ.
ತಾಲ್ಲೂಕಿನ ವರದನಾಯಕನಹಳ್ಳಿಯ ಗ್ರಾಮದೇವತೆಯರಾದ ಶ್ರೀ ಪಟಾಲಮ್ಮದೇವಿ ಮತ್ತು ಶ್ರೀ ವೀರಸೊಣ್ಣಮ್ಮದೇವಿಯರು ಶಕ್ತಿ ದೇವಿಯರಾಗಿ ಪ್ರಸಿದ್ಧರು. ಈ ಸಹೋದರಿ ದೇವಿಯರ ರಥೋತ್ಸವ ಮತ್ತು ಜೋಡಿ ಉಟ್ಲು ಪ್ರತಿ ವರ್ಷ ವಿಜೃಂಭಣೆಯಿಂದ ನಡೆಯುತ್ತದೆ.
ವರದನಾಯಕನಹಳ್ಳಿ ಎಂಬ ಹೆಸರು ವರದನಾಯಕ ಎಂಬ ಪಾಳೇಗಾರ ಸ್ಥಾಪಿಸಿದ್ದರಿಂದ ಬಂದಿದೆ ಎಂದು ಹಿರಿಯರು ಹೇಳುತ್ತಾರೆ. ಆತನ ಕನಸಿನಲ್ಲಿ ಬಂದ ಗ್ರಾಮದೇವತೆಯರು, ಗ್ರಾಮದಲ್ಲಿ ತಮಗಿರುವ ಗುಡಿ ಸಣ್ಣದು, ದೊಡ್ಡದಾಗಿ ಕಟ್ಟಿಸುವಂತೆ ಆಜ್ಞಾಪಿಸಿದಾಗ ಆತ ಈಗಿರುವ ಸ್ಥಳದಲ್ಲಿ ದೇವಿಯರಿಗೆ ಗುಡಿಯನ್ನು ಕಟ್ಟಿಸಿದನಂತೆ. ಭೂಮಿ ಆಗಸ ಒಂದಾಗುವಂತೆ ಕಂಡ ದೇವಿಯರ ದರ್ಶನದಿಂದ ಆತ ಅವರ ದಾಸಾನುದಾಸನಾದ ಎಂದು ಕಥೆಯನ್ನು ಗ್ರಾಮಸ್ಥರು ಹೇಳುತ್ತಾರೆ.
ಈ ಶಕ್ತಿದೇವತೆಗಳ ರಥೋತ್ಸವವನ್ನು ಗ್ರಾಮಸ್ಥರು ಒಗ್ಗೂಡಿ ನೆಂಟರನ್ನೆಲ್ಲಾ ಕರೆಸಿ ಆಚರಿಸುತ್ತಾರೆ. ಅನ್ನಸಂತರ್ಪಣೆ, ಪಾನಕ ಸೇವೆ, ದೀಪೋತ್ಸವ, ಮೆರವಣಿಗೆ, ಕಲಾಪ್ರದರ್ಶನ ಮುಂತಾದವುಗಳೊಂದಿಗೆ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ.
ಶ್ರೀಪಟಾಲಮ್ಮದೇವಿ ಮತ್ತು ಶ್ರೀ ವೀರಸೊಣ್ಣಮ್ಮದೇವಿ ದೇವಾಲಯ ಟ್ರಸ್ಟ್ ವತಿಯಿಂದ ಹಳೆಯ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಿ ದೇವರ ವಿಗ್ರಹಗಳು ಹಾಗೂ ವಿನೂತನ ರೀತಿಯಲ್ಲಿ ದೇವಸ್ಥಾನವನ್ನು ಕಟ್ಟಲು ಯೋಜನೆ ರೂಪಿಸಿದ್ದು, ಅದರ ಪ್ರಯುಕ್ತ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.