ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಆವರಣದಲ್ಲಿ ರೇವಾ ವಿಶ್ವವಿದ್ಯಾಲಯ ಹಾಗು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ರೇವಾ ವನಮಹೋತ್ಸವ ಅಂಗವಾಗಿ ಸುಮಾರು 2500 ಸಸಿಗಳನ್ನು ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಚಿಂತಾಮಣಿ ಉಪವಿಭಾಗದ ಡಿವೈಎಸ್‌ಪಿ ಲಕ್ಷ್ಮಯ್ಯ ಮಾತನಾಡಿದರು.
ಕೋವಿಡ್ ಸಂಕಷ್ಟದ ಸಮಯದಲ್ಲಿ ಅರಣ್ಯ ಹಾಗೂ ಗಿಡ ಮರಗಳ ಅಗತ್ಯ ಏನು ಎನ್ನುವುದು ಬಹುತೇಕ ಜನರಿಗೆ ಅರಿವಾಗಿದೆ. ನಾವುಗಳು ಮಾಡಿದ ಅರಣ್ಯ ನಾಶದ ದುಶ್ಪರಿಣಾಮದಿಂದ ಕೋವಿಡ್ ಸಂದರ್ಭದಲ್ಲಿ ಆಮ್ಲಜನಕದ ಕೊರತೆಯಿಂದ ಬಹಳಷ್ಟು ಸಾವು ನೋವುಗಳನ್ನು ನಾವು ಕಂಡಿದ್ದೇವೆ. ಪೃಕೃತಿಯನ್ನು ನಾವು ನಾಶ ಮಾಡಿದರೆ ನಮಗೆ ಉಳಿಗಾಲವಿಲ್ಲ ಎನ್ನುವುದನ್ನು ಪೃಕೃತಿ ನಮಗೆ ಪರೋಕ್ಷವಾಗಿ ತಿಳಿಸಿದೆ. ಇನ್ನಾದರೂ ಪ್ರತಿಯೊಬ್ಬರೂ ಅರಣ್ಯ ಉಳಿಸುವ ಜೊತೆಗೆ ಹೆಚ್ಚಾಗಿ ಗಿಡ ಮರಗಳನ್ನು ಬೆಳೆಸಲು ಮುಂದಾಗಬೇಕು ಎಂದು ಹೇಳಿದರು.
ರೇವಾ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಎಂ.ಧನಂಜಯ ಮಾತನಾಡಿ, ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಕೇವಲ ವಿಧ್ಯಾಭ್ಯಾಸ ಕಲಿಸಿದರಷ್ಟೇ ಸಾಲದು ಬದಲಿಗೆ ಪ್ರಕೃತಿಯ ಬಗ್ಗೆ ಜವಾಬ್ದಾರಿ ಹಾಗೂ ಪ್ರಜ್ಞೆಯನ್ನು ಮೂಡಿಸುವ ಉದ್ದೇಶದಿಂದ ವನ ಮಹೋತ್ಸವ ಕಾರ್ಯಕ್ರಮ ರೂಪಿಸಲಾಗಿದೆ. ಈಗಾಗಲೇ ಬೆಂಗಳೂರು ಸೇರಿದಂತೆ ರಾಜ್ಯದ ವಿವಿದೆಡೆ ಗಿಡಗಳನ್ನು ನೆಡುವ ಕಾರ್ಯ ಮಾಡಿದ್ದು ಇದೀಗ ತಾಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಆವರಣದಲ್ಲಿ ಸುಮಾರು 2500 ಗಿಡಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ ಎಂದರು.
ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಡಿ.ಎಸ್.ಎನ್.ರಾಜು ಮಾತನಾಡಿ, ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಪ್ರತಿಯೊಬ್ಬರೂ ಮನೆಗೊಂದು ಮರ, ಊರಿಗೊಂದು ವನ ಇರುವಂತೆ ನೋಡಿಕೊಳ್ಳಬೇಕು ಎಂದರು. ತಾಲ್ಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಆವರಣದಲ್ಲಿ ಬೆಳೆದಿರುವ ನೀಲಗಿರಿ ಮರಗಳನ್ನು ತೆರವು ಮಾಡಿಸುವುದು ಸೇರಿದಂತೆ ಠಾಣೆಯ ಆವರಣದಲ್ಲಿರುವ ಬ್ರಿಟೀಷರ ಕಾಲದ ಅತಿಥಿಗೃಹವನ್ನು ಸ್ಮಾರಕವನ್ನಾಗಿ ಉಳಿಸಿಕೊಳ್ಳಲು ಅಗತ್ಯ ಸಹಕಾರ ನೀಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಧರ್ಮೇಗೌಡ, ದಿಬ್ಬೂರಹಳ್ಳಿ ಠಾಣೆ ಪಿಎಸ್ಸೈ ಎಂ.ಪಾಪಣ್ಣ, ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನಮ್ಮ, ಮಾಜಿ ಅಧ್ಯಕ್ಷ ಡಾ.ಧನಂಜಯರೆಡ್ಡಿ, ಉಪಾಧ್ಯಕ್ಷ ಡಿ.ಜಿ.ರಾಮಚಂದ್ರ, ಸದಸ್ಯರಾದ ಡಿ.ಪಿ.ನಾಗರಾಜ್, ಆವಲರೆಡ್ಡಿ, ಮಾಜಿ ಸದಸ್ಯ ಡಿ.ಎ.ಪ್ರಸನ್ನ, ರೇವಾ ವಿಶ್ವವಿದ್ಯಾಲಯದ ನಿರ್ದೇಶಕರಾದ ಡಾ.ವೈ.ರಾಮಲಿಂಗಾರೆಡ್ಡಿ, ಡಾ.ನಾರಾಯಣಸ್ವಾಮಿ, ರೇವಾ ವಿಶ್ವವಿದ್ಯಾಲಯದ ಸಿಬ್ಬಂದಿ ಹಾಗು ವಿದ್ಯಾರ್ಥಿಗಳು ಹಾಜರಿದ್ದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi