ವಾಲ್ಮೀಕಿ ಸಮುದಾಯಕ್ಕೆ ನೀಡಿರುವ ಭರವಸೆಯಂತೆ ಶೇ 7.5 ಮೀಸಲಾತಿಯನ್ನು ಕೂಡಲೇ ಘೋಷಿಸುವ ಮೂಲಕ ಕೊಟ್ಟ ಮಾತನ್ನು ಮುಖ್ಯಮಂತ್ರಿಗಳು ಉಳಿಸಿಕೊಳ್ಳಬೇಕು ಎಂದು ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಸ್ವಾಮಿ ಹೇಳಿದರು.
ಫೆಬ್ರುವರಿ 8 ಮತ್ತು 9 ರಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿರುವ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ನಡೆಯಲಿರುವ ವಾಲ್ಮೀಕಿ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ನಗರಕ್ಕೆ ಭೇಟಿ ನೀಡಿದ ಶ್ರೀಗಳು ನಗರದ ಎಸ್.ಎಲ್.ಎನ್ ಪ್ಲಾಜಾ ದಲ್ಲಿ ಸಮುದಾಯದ ಮುಖಂಡರ ಸಭೆ ಹಾಗೂ ನೂತನವಾಗಿ ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಸಮುದಾಯದ ಸದಸ್ಯರನ್ನು ಸನ್ಮಾನಿಸಿ ಮಾತನಾಡಿದರು.
ರಾಜ್ಯದ ನಾಲ್ಕನೇ ಅತಿದೊಡ್ಡ ಸಮುದಾಯವಾಗಿರುವ ವಾಲ್ಮೀಕಿ ಸಮುದಾಯದ ಮಕ್ಕಳಿಗೆ ಉದ್ಯೋಗ ಹಾಗು ಶಿಕ್ಷಣ ಕ್ಷೇತ್ರದಲ್ಲಿ ಶೇ 7.5 ಮೀಸಲಾತಿ ನೀಡುವಂತೆ ಕಳೆದ ಮೂರು ದಶಕಗಳಿಂದ ಹೋರಾಟ ಮಾಡಲಾಗುತ್ತಿದೆಯಾದರೂ ಈವೆರಗೂ ಅನುಷ್ಟಾನಕ್ಕೆ ಬಂದಿಲ್ಲ. ಮುಂಬರುವ ಫೆಬ್ರುವರಿ 8 ಮತ್ತು 9 ರಂದು ನಡೆಯಲಿರುವ ವಾಲ್ಮೀಕಿ ಜಾತ್ರಾ ಮಹೋತ್ಸವಕ್ಕೂ ಮುನ್ನ ಮೀಸಲಾತಿ ಘೋಷಿಸಬೇಕು ಇಲ್ಲವಾದಲ್ಲಿ ಸಮುದಾಯದೊಂದಿಗೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಜಾತ್ರಾ ಮಹೋತ್ಸವದಲ್ಲಿ ರಾಜ್ಯದ ವಿವಿದೆಡೆಯಿಂದ ಲಕ್ಷಾಂತರ ಮಂದಿ ಆಗಮಿಸುವ ನಿರೀಕ್ಷೆಯಿದೆ. ಇದು ಕೇವಲ ಜಾತ್ರೆಯಾಗಿರದೇ ಸಮುದಾಯದ ಜಾಗೃತಿ ಮೂಡಿಸುವ ವೇದಿಕೆಯಾಗಬೇಕು. ಅಭಿವೃದ್ಧಿಯಲ್ಲಿ ಹಿಂದುಳಿದಿರುವ ನಾಯಕ ಸಮುದಾಯದ ನೋವು ಸರ್ಕಾರಗಳಿಗೆ ತಿಳಿಯುವಂತೆ ಮಾಡಬೇಕಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ನೂತನವಾಗಿ ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಸಮುದಾಯದ ಸದಸ್ಯರು ತಮ್ಮ ತಮ್ಮ ಗ್ರಾಮಗಳ ಅಭಿವೃದ್ದಿಗೆ ಶ್ರಮಿಸಬೇಕು. ಸಮುದಾಯದ ವಿಷಯ ಬಂದಾಗ ಆ ಪಕ್ಷ, ಈ ಪಕ್ಷ ಎಂಬುದನ್ನು ಬಿಟ್ಟು ಎಲ್ಲರೂ ಒಗ್ಗಟ್ಟಾಗಿ ಸಮುದಾಯದ ಏಳಿಗೆಗಾಗಿ ದುಡಿಯಬೇಕೆಂದರು.
ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ಜಿಲ್ಲಾಧ್ಯಕ್ಷ, ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, ಸಮುದಾಯದ ಪ್ರತಿಯೊಬ್ಬರೂ ವರ್ಷಕ್ಕೊಮ್ಮೆಯಾದರೂ ಗುರುಪೀಠಕ್ಕೆ ಭೇಟಿ ನೀಡುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ರಾಜ್ಯಾಧ್ಯಂತ ಇರುವ ಸಮುದಾಯದವರು ಒಗ್ಗಟ್ಟಾಗಿರಲು ಸಾಧ್ಯವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಜಾತ್ರಾ ಮಹೋತ್ಸವದ ಆಚರಣಾ ಸಮಿತಿಗೆ ತಾಲ್ಲೂಕಿನಿಂದ ಐದು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ತಾಲ್ಲೂಕು ಅಧ್ಯಕ್ಷ ರಾಮಚಂದ್ರಪ್ಪ, ಹಿರಿಯ ಮುಖಂಡರಾದ ಲಗುನಾಯಕನಹಳ್ಳಿ ಎನ್.ಮುನಿಯಪ್ಪ, ಗೊರಮಿಲ್ಲಹಳ್ಳಿ ವೆಂಕಟೇಶ್, ದ್ಯಾವಪ್ಪ, ರಾಜೇಂದ್ರ, ನಟರಾಜ್, ಬ್ಯಾಟರಾಯಪ್ಪ, ಶಿವಶಂಕರ್, ಜೆ.ಎಂ.ವೆಂಕಟೇಶ್, ತ್ಯಾಗರಾಜ್, ಮುಗಿಲಡಿಪಿ ನಂಜಪ್ಪ, ತಾಲ್ಲೂಕು ಘಟಕ, ಯುವಘಟಕ ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳು ಹಾಜರಿದ್ದರು.