ಶಿಡ್ಲಘಟ್ಟ ನಗರದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ಶನಿವಾರ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣುಗಳನ್ನು ವಿತರಿಸಿ, ನಗರೇಶ್ವರಸ್ವಾಮಿ ಕಲ್ಯಾಣಮಂಟಪದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಾಸಕ ಎಂ.ರಾಜಣ್ಣ ಮಾತನಾಡಿದರು.
ಧೀಮಂತ ನಾಯಕ, ಕವಿ ಹೃದಯಿ, ಅಜಾತ ಶತ್ರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ದೇಶಪ್ರೇಮ, ಸೇವಾಮನೋಭಾವನೆ, ನಿಸ್ವಾರ್ಥ ಸೇವೆಯನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ದೇಶ ಕಂಡ ಅಪ್ರತಿಮ ನಾಯಕ. ರಾಷ್ಟ್ರೀಯ ಹೆದ್ದಾರಿಯ ಪರಿಕಲ್ಪನೆಯನ್ನು ಪೂರ್ಣಗೊಳಿಸಿದ ಸಾಧನೆ ಅವರದ್ದಾಗಿದೆ. ದೇಶದಲ್ಲಿ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳ ಸಹಕಾರದೊಂದಿಗೆ ಅಜಾತಶತ್ರು ಎನಿಸಿಕೊಂಡ ಅವರು ದೇಶದಲ್ಲಿ ಅಭಿವೃದ್ಧಿ ಪರ್ವವನ್ನೆ ಹುಟ್ಟುಹಾಕಿದರು. ನಾವೆಲ್ಲರೂ ಇಂದು ಅವರ ಕನಸಿನ ಹಾದಿಯಲ್ಲಿಯೇ ಸಾಗಿ ದೇಶದ ಅಭಿವೃದ್ಧಿಯತ್ತ ಗಮನಹರಿಸಬೇಕಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಿ.ಸಿ.ನಂದೀಶ್ ಮಾತನಾಡಿ, ನೆರೆಹೊರೆಯ ದೇಶಗಳಿಗೆ, “ಭಯೋತ್ಪಾದನೆ ಹಾಗೂ ನಂಬಿಕೆ ಒಟ್ಟಿಗೆ ಇರಲು ಸಾಧ್ಯವೇ ಇಲ್ಲ” ಎಂಬ ಸ್ಪಷ್ಟ ನೆಲೆಯನ್ನು ಅರ್ಥೈಸಿಯೇ ವಾಜಪೇಯಿ ಅವರು ಉತ್ತಮ ಬಾಂಧವ್ಯ ಹಾಗೂ ಸ್ನೇಹವನ್ನು ಹೊಂದಿದ್ದರು. 1998ರಲ್ಲಿ ಪೊಕ್ರಾನ್ ಪರಮಾಣು ಪರೀಕ್ಷೆ ಸಂಬಂಧ ವಾಜಪೇಯಿ ಅವರು ಕೈಗೊಂಡ ನಿರ್ಧಾರ ಎಂದಿಗೂ ಚಿರಸ್ಥಾಯಿಯಾಗಿರುವಂಥದ್ದು ಎಂದು ಸ್ಮರಿಸಿದರು.
ಬಿಜೆಪಿ ಗ್ರಾಮಾಂತರ ಮಂಡಲಾಧ್ಯಕ್ಷ ಸುರೇಂದ್ರಗೌಡ ಮಾತನಾಡಿ, ಅಟಲ್ ಜೀ ಅವರ ಕನಸನ್ನು ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು ಈಡೇರಿಸುತ್ತಿದ್ದಾರೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ– ಕಿಸಾನ್) ಯೋಜನೆ ಅಡಿಯಲ್ಲಿ 9 ಕೋಟಿಗೂ ಹೆಚ್ಚು ರೈತರಿಗೆ 18,000 ಕೋಟಿ ರೂ ಪರಿಹಾರವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ. ಪಿಎಂ-ಕಿಸಾನ್ ಯೋಜನೆಯಡಿ ಸಣ್ಣ ಮತ್ತು ಅತಿಸಣ್ಣ ರೈತರಿಗೆ ವಾರ್ಷಿಕ 6000 ರೂ ಪರಿಹಾರವನ್ನು ನೀಡಲಾಗುತ್ತದೆ. ಈ ಮೊತ್ತವನ್ನು ಮೂರು ಕಂತುಗಳಲ್ಲಿ 2000 ರೂ ಗಳಂತೆ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗುತ್ತದೆ ಎಂದರು.
ಬಿಜೆಪಿ ನಗರ ಮಂಡಲಾಧ್ಯಕ್ಷ ರಾಘವೇಂದ್ರ, ಸುಜಾತಮ್ಮ, ಮಂಜುಳಮ್ಮ, ರಮೇಶ್, ನರೇಶ್, ಮುಕೇಶ್, ಭರತ್, ಸುಹೇಲ್, ರಘು, ಕಿರಣ್, ಜನಾರ್ಧನ್, ತ್ರಿವೇಣಿ, ರತ್ನಮ್ಮ, ಅಶ್ವಿನಿ ಹಾಜರಿದ್ದರು.