Sidlaghatta : ತಾಲ್ಲೂಕಿನಾದ್ಯಂತ ವೈಕುಂಠ ಏಕಾದಶಿ ಹಬ್ಬವನ್ನು ಭಕ್ತಿಭಾವಪೂರ್ಣವಾಗಿ ಮತ್ತು ವಿಜೃಂಭಣೆಯಿಂದ ಆಚರಿಸಲಾಯಿತು. ಕಲಿಯುಗದ ಆರಾಧ್ಯ ದೈವ ಶ್ರೀಲಕ್ಷ್ಮಿ ಸಮೇತ ವೆಂಕಟೇಶ್ವರಸ್ವಾಮಿ ಅವರನ್ನು ಸ್ಮರಿಸಿ, ಭಜನೆ, ಪೂಜೆ, ಮತ್ತು ವಿವಿಧ ಧಾರ್ಮಿಕ ಕೃತ್ಯಗಳು ನಡೆದವು.
ತಾಲ್ಲೂಕಿನ ಮೇಲೂರು ಭೂದೇವಿ ಸೌಮ್ಯ ಚನ್ನಕೇಶವಸ್ವಾಮಿ ಮತ್ತು ಶ್ರೀ ತಿರುಮಲಸ್ವಾಮಿ ದೇವಾಲಯ, ಉತ್ತರ ಪಿನಾಕಿನಿ ನದಿ ತಟದಲ್ಲಿರುವ ಶ್ರೀಭೂನೀಳಾ ಸಮೇತ ವೆಂಕಟರಮಣಸ್ವಾಮಿ, ಬೆಳ್ಳೂಟಿ ಗೇಟ್‌ನ ಶ್ರೀಲಕ್ಷ್ಮಿ ವೆಂಕಟೇಶ್ವರಸ್ವಾಮಿ, ಚಿಕ್ಕದಾಸರಹಳ್ಳಿಯ ಗುಟ್ಟದ ಮೇಲಿನ ಶ್ರೀಭೂನೀಳಾ ಸಮೇತ ಬ್ಯಾಟರಾಯಸ್ವಾಮಿ ದೇವಾಲಯ, ಮತ್ತು ಭಟ್ರೇನಹಳ್ಳಿಯ ಸಾಯಿ ಮಂದಿರ ಸೇರಿದಂತೆ ಅನೇಕ ದೇವಾಲಯಗಳಲ್ಲಿ ವೈಕುಂಠ ಏಕಾದಶಿ ಹಬ್ಬದ ಶ್ರೇಷ್ಠತೆ ಮೆರೆದವು.
ಬೆಳಗ್ಗಿನಿಂದಲೇ ವಿಶೇಷ ಪೂಜೆ, ಹೋಮ, ಹವನಗಳು ನಡೆಯಿತು. ಮಹಾ ಮಂಗಳಾರತಿ ನಂತರ ತೀರ್ಥ ಮತ್ತು ಪ್ರಸಾದ ವಿತರಣೆಯ ಮೂಲಕ ಭಕ್ತರನ್ನು ಆನಂದಭರವಸುವಂತೆ ಮಾಡಲಾಯಿತು. ಭಕ್ತರು ಸಪ್ತ ಧ್ವಾರಗಳನ್ನು ದಾಟಿ ದೈವ ದರ್ಶನ ಪಡೆದು, ತಮ್ಮ ಭಕ್ತಿಯನ್ನು ತೋರಿಸಿದರು.
ತಿರುಪತಿ ತಿಮ್ಮಪ್ಪನ ಪ್ರಸಿದ್ಧ ಲಡ್ಡು ಮಾದರಿಯಲ್ಲಿ, ಸ್ಥಳೀಯ ದೇವಾಲಯಗಳಲ್ಲಿ ಲಡ್ಡು ಪ್ರಸಾದವನ್ನು ಭಕ್ತರಿಗೆ ವಿತರಿಸಲಾಯಿತು. ಬೆಳಗ್ಗಿನಿಂದಲೇ ದೇವಾಲಯಗಳಲ್ಲಿ ಭಕ್ತರ ಸರತಿ ಸಾಲುಗಳು ಕಂಡುಬಂತು, ದೇವಾಲಯಗಳ ಆವರಣ ಭಕ್ತರ ದರ್ಶನದಿಂದ ಶೋಭಯುಕ್ತವಾಗಿತ್ತು.
ಕ್ಷೇತ್ರದ ಶಾಸಕ ಬಿ.ಎನ್. ರವಿಕುಮಾರ್, ಕಾಂಗ್ರೆಸ್ ಮುಖಂಡ ರಾಜೀವ್‌ಗೌಡ, ಮಾಜಿ ಶಾಸಕರಾದ ಎಂ. ರಾಜಣ್ಣ ಮತ್ತು ಇತರ ಗಣ್ಯರು ದೇವಾಲಯಗಳಿಗೆ ತೆರಳಿ, ಪೂಜೆ ಸಲ್ಲಿಸಿ ಭಗವಂತನ ಕೃಪೆಗೆ ಭಾಜನರಾದರು.