Sidlaghatta : ನಮ್ಮ ನೆರೆಹೊರೆ ಇರುವ ಅಂಗವಿಕಲರನ್ನು ನಮ್ಮಂತೆಯೆ ಸಮಾನತೆಯಿಂದ ಕಾಣುವ ಮೂಲಕ ಅವರಲ್ಲಿ ಆತ್ಮ ವಿಶ್ವಾಸವನ್ನು ಬೆಳೆಸಬೇಕೆ ಹೊರತು ಅನುಕಂಪ ತೋರುವುದಾಗಲಿ ಅನಗತ್ಯವಾದ ಕಾಳಜಿ ತೋರುವ ಕೆಲಸ ಆಗಬಾರದು ಎಂದು ಶಿಡ್ಲಘಟ್ಟದ ತಹಶೀಲ್ದಾರ್ ಬಿ.ಎನ್.ಸ್ವಾಮಿ ತಿಳಿಸಿದರು.
ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಿಂದ ಕೊಡುಗೆಯಾಗಿ ನೀಡಿದ ಅಂಗವಿಕಲರಿಗಾಗಿಯೆ ವಿಶೇಷವಾಗಿ ರೂಪಿಸಿದ ಬ್ಯಾಟರಿ ಚಾಲಿತ ಟ್ರೈಸೈಕಲ್‌ಗಳನ್ನು ನಗರದ ಹೊರವಲಯದ ಚಿಂತಾಮಣಿ ರಸ್ತೆಯ ಕರ್ಣಶ್ರೀ ಸಮುದಾಯ ಭವದನ ಬಳಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಿ ಅವರು ಮಾತನಾಡಿದರು.
ತಾಲ್ಲೂಕಿನ ಹಿತ್ತಲಹಳ್ಳಿಯ ಪ್ರಗತಿಪರ ರೈತ ಗೋಪಾಲಗೌಡರ ಮಗ ಡಾ.ಗೋವಿಂದಗೌಡ ಅವರು ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದು ಅವರ ಮೂಲಕ ಹತ್ತು ಮಂದಿ ಅಂಗವಿಕಲರಿಗೆ ಟ್ರೈಸೈಕಲ್‌ಗಳನ್ನು ಉಚಿತವಾಗಿ ವಿತರಿಸುವಂತಾಗಿದೆ ಎಂದರು.
ಅಂಗವಿಕಲರಿಗೆ ಈ ಬ್ಯಾಟರಿ ಚಾಲಿತ ಟ್ರೈಸೈಕಲ್ ಬಹಳ ಸಹಕಾರಿ ಆಗಲಿದೆ, ಇದರ ಸದುಪಯೋಗ ಆಗಲಿ ಎಂದು ಆಶಿಸಿದರು.
ಸುಮಾರು 12 ಲಕ್ಷ ರೂ ಬೆಲೆ ಬಾಳುವ 10 ಟ್ರೈಸೈಕಲ್‌ಗಳನ್ನು ಅಂಗವಿಕಲರಿಗೆ ಉಚಿತವಾಗಿ ವಿತರಿಸಲಾಯಿತು.
ಹಿತ್ತಲಹಳ್ಳಿ ಗೋಪಾಲಗೌಡ, ಶಿಡ್ಲಘಟ್ಟ ನಗರಸಭೆ ಪೌರಾಯುಕ್ತ ಆರ್.ಶ್ರೀಕಾಂತ್, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್, ನವಜೀವನ ಸೇವಾ ಸಂಘದ ಅಧ್ಯಕ್ಷ ಬೆಳ್ಳೂಟಿ ಮುನಿರಾಜು, ಜಗದೀಶ್, ಕೃಷಿಕ ಸಮಾಜದ ನಿರ್ದೇಶಕ ಮಂಜುನಾಥರೆಡ್ಡಿ ಹಾಜರಿದ್ದರು.