ತಾಲ್ಲೂಕಿನ ಎಚ್.ಕ್ರಾಸ್ ನಲ್ಲಿ ವಿವಿಧ ಖಾಸಗಿ ಕ್ಲಿನಿಕ್ ಗಳು ಹಾಗೂ ಔಷಧಿ ಅಂಗಡಿಗಳಿಗೆ ಭೇಟಿ ಪರಿಶೀಲಿಸಿ, ವೈದ್ಯರ ಚೀಟಿ ಇಲ್ಲದೆ ಔಷಧಿ ಮಾರುವುದು, ರೋಗಿಗಳಿಗೆ ಕೋವಿಡ್ ಪರೀಕ್ಷೆ ಮಾಡಿಸದೇ ಚಿಕಿತ್ಸೆ ನೀಡುತ್ತಿರುವ ಖಾಸಗಿ ವೈದ್ಯರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ನೀಡಿ ತಹಶೀಲ್ದಾರ್ ರಾಜೀವ್ಎಚ್ಚರಿಕೆ ಕೊಟ್ಟರು.
ತಾಲ್ಲೂಕು ಆರೋಗ್ಯಾಧಿಕಾರಿಗಳೊಂದಿಗೆ ತಾಲ್ಲೂಕಿನ ವಿವಿಧ ಖಾಸಗಿ ಕ್ಲಿನಿಕ್ ಗಳು ಹಾಗೂ ಔಷಧಿ ಅಂಗಡಿಗಳಿಗೆ ಭೇಟಿ ನೀಡುತ್ತಿದ್ದು, ಕೊರೊನಾ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಔಷಧಿ ವ್ಯಾಪಾರಿಗಳು ಹಾಗೂ ಖಾಸಗಿ ವೈದ್ಯರು ತಾಲ್ಲೂಕು ಆಡಳಿತದೊಂದಿಗೆ ಸಹಕರಿಸಬೇಕು. ಜ್ವರ, ಕೆಮ್ಮು, ನೆಗಡಿ ಎಂದು ಬರುವ ರೋಗಿಗಳಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಖಾಸಗಿ ವೈದ್ಯರು ತಿಳಿಹೇಳಬೇಕು. ವೈದ್ಯರ ಚೀಟಿಯಿಲ್ಲದ ರೋಗಿಗಳಿಗೆ ಔಷಧಿಗಳನ್ನು ಅಂಗಡಿಗಳಲ್ಲಿ ಕೊಡಬಾರದು ಎಂದು ಈಗಾಗಲೇ ತಿಳಿಸಿದ್ದೇವೆ. ನಿಯಮ ಮೀರಿದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಈ ಸಂದರ್ಭದಲ್ಲಿ ಅವರು ತಿಳಿಸಿದರು.
ಜನರಲ್ಲಿ ತಿಳಿವಳಿಕೆ ಮೂಡಿಸುವ ಕೆಲಸ ಹೆಚ್ಚೆಚ್ಚು ಆಗಬೇಕಿದೆ. ಒಬ್ಬರಿಂದೊಬ್ಬರಿಗೆ ಹರಡುವ ಈ ಖಾಯಿಲೆಯನ್ನು ತಡೆಗಟ್ಟಲು ಹೆಚ್ಚೆಚ್ಚು ಕೋವಿಡ್ ಪರೀಕ್ಷೆಗಳು ನಡೆಯಬೇಕು ಮತ್ತು ಲಸಿಕೆ ಹಾಕಿಸಬೇಕು. ಯಾವುದೇ ಔಷಧಿ ಅಂಗಡಿಗಳ ಬಳಿ ಜನರು ಗುಂಪುಗೂಡಿರುವುದಾಗಲೀ, ವೈದ್ಯರ ಚೀಟಿಯಿಲ್ಲದೇ ಮಾತ್ರೆ ಕೊಡುವುದು ಕಂಡುಬಂದಲ್ಲಿ ಅವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ನೀವೂ ನಿಮ್ಮ ಜವಾಬ್ದಾರಿಯನ್ನು ನಿರ್ವಹಿಸಿ ಎಂದು ತಿಳಿಸಿದ್ದೇವೆ ಎಂದರು.
ಸರ್ಕಾರಿ ವೈದ್ಯರು, ದಾದಿಯರು, ಲ್ಯಾಬ್ ಟೆಕ್ನೀಶಿಯನ್ ಗಳು, ಆಶಾ ಕಾರ್ಯಕರ್ತೆಯರ ಸೇವೆ ಅನನ್ಯವಾದದ್ದು. ಕುಟುಂಬವನ್ನೆಲ್ಲಾ ಬಿಟ್ಟು ಅವರು ಜನರ ಆರೋಗ್ಯಕ್ಕಾಗಿ ಸೇವೆಸಲ್ಲಿಸುತ್ತಿದ್ದಾರೆ. ಇವರಿಗೆ ಗೌರವ ಸೂಚಿಸುತ್ತಾ, ಸಾಧ್ಯವಾದಷ್ಟೂ ಇತರರಿಗೆ ನೆರವಾಗಿ, ಸರ್ಕಾರದ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಕೊರೊನಾ ತಡೆಗಟ್ಟಬಹುದು ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ ಮೂರ್ತಿ ಮಾತನಾಡಿ, ಕುಂಬಿಗಾನಹಳ್ಳಿ ಪಿಡಿಒ ಕರೆಮಾಡಿ, ಎಚ್.ಕ್ರಾಸ್ ನಲ್ಲಿರುವ ಆಸ್ಪತ್ರೆಗಳಿಗೆ ತುಂಬಾ ಜನ ಬರುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಅದರಂತೆ ನಾವು ಅಲ್ಫ಼ಲಿಗೆ ಭೇಟಿ ನೀಡಿ, ನೀವೂ ತೊಂದರೆಗೊಳಗಾಗುವುದಲ್ಲದೆ, ರೋಗ ಹರಡಲು ಕಾರಣರಾಗಬೇಡಿ ಎಂದು ಅವರಿಗೆ ಬುದ್ಧಿವಾದ ಹೇಳಿದ್ದೇವೆ. ಔಷಧಿ ಅಂಗಡಿಗಳವರು ತಾವು ಮಾರುವ ಜ್ವರ, ನೆಗಡಿ, ಕೆಮ್ಮಿನ ಮಾತ್ರೆಗಳ ಹಾಗೂ ರೋಗಿಯ ಮಾಹಿತಿ ಆಪ್ ನಲ್ಲಿ ಅಪ್ ಲೋಡ್ ಮಾಡಬೇಕು ಎಂದು ತಿಳಿಸಿದ್ದೇವೆ ಎಂದರು.