
ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯಿತಿಯ ಶೆಟ್ಟಿಹಳ್ಳಿಯಲ್ಲಿ 75 ನೇ ವರ್ಷದ ಭಾರತದ ಸ್ವಾತಂತ್ರ್ಯದ ಅಮೃತಮಹೋತ್ಸವ ಅಂಗವಾಗಿ ತಾಲ್ಲೂಕು ಆಡಳಿತ, ಗ್ರಾಮ ಪಂಚಾಯಿತಿ ಹಾಗೂ ಫೌಂಡೇಷನ್ ಫಾರ್ ಎಕಲಾಜಿಕಲ್ ಸೆಕ್ಯೂರಿಟಿ ಸಂಯುಕ್ತಾಶ್ರಯದಲ್ಲಿ “ಶ್ರಮದಾನದ ಮೂಲಕ ಕಲ್ಯಾಣಿಯ ಸ್ವಚ್ಛತೆ ಮತ್ತು ಯೋಗ ಶಿಬಿರ” ಕಾರ್ಯಕ್ರಮದಲ್ಲಿ ಭಾಗಿಯಾಗಿ ತಾಲ್ಲೂಕು ಪಂಚಾಯಿತಿ ಇಒ ಚಂದ್ರಕಾಂತ್ ಮಾತನಾಡಿದರು.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 74 ವರ್ಷಗಳು ಕಳೆದಿದ್ದು 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುವ ಸುಸಂದರ್ಭದಲ್ಲಿ ಜಿಲ್ಲೆಯಾದ್ಯಂತ 75 ಕಾರ್ಯಕ್ರಮಗಳನ್ನು ಜಿಲ್ಲಾಡಳಿತ ಯೋಜನೆ ರೂಪಿಸಿದೆ. ಅದರಂತೆ ಶೆಟ್ಟಿಹಳ್ಳಿ ಗ್ರಾಮದಲ್ಲಿ ಯೋಗ ಶಿಬಿರ ಮತ್ತು ಶ್ರಮದಾನದ ಮೂಲಕ ಕಲ್ಯಾಣಿಯ ಸ್ವಚ್ಛತೆ ಕಾರ್ಯಕ್ರಮವನ್ನು ಎಫ್ಇಎಸ್ ಸಹಕಾರದೊಂದಿಗೆ ಮಾಡಲಾಗುತ್ತಿದೆ. ಹಿರಿಯರು ನಮಗೆ ವರದಾನವಾಗಿ ನೀಡಿರುವ ಕೆರೆ, ಕುಂಟೆ, ಕಲ್ಯಾಣಿಗಳನ್ನು ಉಳಿಸಿಕೊಳ್ಳುವ ಅಗತ್ಯ ಬಹಳಷ್ಟಿದೆ. ಕಲ್ಯಾಣಿಗಳನ್ನು ನರೇಗಾ ಯೋಜನೆಯ ಮೂಲಕ ಅಭಿವೃದ್ಧಿ ಪಡಿಸಿ ಉತ್ತಮವಾಗಿ ನಿರ್ವಹಣೆ ಮಾಡಿದಲ್ಲಿ ಮುಂದಿನ ಪೀಳಿಗೆ ನೀರಿಗಾಗಿ ಪರಿತಪಿಸುವ ಅಗತ್ಯವಿರುವುದಿಲ್ಲ ಎಂದು ಹೇಳಿದರು.
ತಹಶೀಲ್ದಾರ್ ಬಿ.ಎಸ್.ರಾಜೀವ್ ಮಾತನಾಡಿ, ನಮ್ಮೆಲ್ಲರ ನಿಜವಾದ ಆಸ್ತಿಗಳಾದ ಕೆರೆ, ಕುಂಟೆ,ಗೋಮಾಳ ಮತ್ತು ಕಲ್ಯಾಣಿಗಳನ್ನು ಸಂರಕ್ಷಣೆ ಮಾಡಲು ಗ್ರಾಮಸ್ಥರೆಲ್ಲರೂ ಒಂದಾಗಬೇಕು. ಇಂತಹ ಪುರಾತನ ಕಲ್ಯಾಣಿಗಳ ಜೀರ್ಣೋದ್ಧಾರಕ್ಕಾಗಿ ಪ್ರತಿಯೊಬ್ಬರು ಪಣತೊಡಬೇಕಿದೆ. ಅವುಗಳನ್ನು ಅಭಿವೃದ್ಧಿ ಪಡಿಸುವ ನೀಲ ನಕ್ಷೆಯನ್ನು ಗ್ರಾಮ ಪಂಚಾಯಿತಿಗಳು ಮಾಡಬೇಕಿದೆ ಎಂದು ಹೇಳಿದರು.
ಆಯುಷ್ ಇಲಾಖೆಯ ವೈದ್ಯಾಧಿಕಾರಿ ಸುಂದರ್ ಶಾಲಾ ಮಕ್ಕಳಿಗೆ ಮತ್ತು ಗ್ರಾಮಸ್ಥರಿಗೆ ಯೋಗಾಭ್ಯಾಸ ಮಾಡಿಸಿದರು. ಪರಿಸರ ಭದ್ರತಾ ಪ್ರತಿಷ್ಠಾನ ಸಂಸ್ಥೆಯ ಉಪ ಯೋಜನಾಧಿಕಾರಿ ಆಗಟಮಡಕ ರಮೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರ್ಮಲ ಬೈರೇಗೌಡ, ಪಿಡಿಒ ಶಾಂತ, ಉಪಾಧ್ಯಕ್ಷೆ ನಂದಿನಿ, ಸದಸ್ಯರಾದ ದೇವರಾಜ್, ನಳಿನಿ, ನಾರಾಯಣಸ್ವಾಮಿ, ಶ್ರೀನಾಥ್, ಹರೀಶ್, ಮಂಜುನಾಥ್, ಕಾರ್ಯದರ್ಶಿಗಳಾದ ಮದ್ದಿರೆಡ್ಡಿ, ಕರ ವಸೂಲಿಗಾರ ಶಶಿಕುಮಾರ್, ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ವಿನಿತಾ, ಕಸಬಾ ಕಂದಾಯ ನಿರೀಕ್ಷಕ ಪ್ರಶಾಂತ್ ಹಾಜರಿದ್ದರು.