Sidlaghatta : ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸುವುದೇ ಮುಖ್ಯ ಎಂದು ತಿಳಿದಿದ್ದು, ಪೋಷಕರು ಸಹ ಮಕ್ಕಳ ಮೇಲೆ ಒತ್ತಡ ಹೇರುವುದರಿಂದ ಮಕ್ಕಳು ಖಿನ್ನತೆಗೆ ಒಳಗಾಗುವ ಸಾಧ್ಯತೆಯಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಯಮನಪ್ಪ ಕರೆಹನುಮಂತಪ್ಪ ಹೇಳಿದರು.
ಶಿಡ್ಲಘಟ್ಟ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಆತ್ಮಹತ್ಯಾ ತಡೆ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅತಿಯಾದ ಒತ್ತಡದಿಂದ ಯುವಜನತೆಯ ಆತ್ಮಹತ್ಯೆ ಸಂಖ್ಯೆ ಹೆಚ್ಚಾಗುತ್ತಿವೆ. ಹೀಗಾಗಿ ಒತ್ತಡ ನಿಭಾಯಿಸುವ ಕಲೆಯನ್ನು ಪಠ್ಯದಲ್ಲಿ ಸೇರಿಸುವುದು ಅವಶ್ಯಕವಾಗಿದೆ. ಯುವಕರು ಇಂದು ಸಣ್ಣಪುಟ್ಟ ಸೋಲುಗಳಿಗೂ ಆತ್ಮಹತ್ಯೆ ಹಾದಿ ಹಿಡಿಯುತ್ತಿರುವುದು ಸರಿಯಲ್ಲ. ಮನುಷ್ಯರಾಗಿ ಹುಟ್ಟಿರುವುದೇ ಸಾಧನೆ ಮಾಡಲು. ಹೀಗಾಗಿ ಯುವ ಸಮೂಹ ಆತ್ಮಹತ್ಯೆ ಹಾದಿ ಬಿಟ್ಟು ಸಾಧನೆ ಕಡೆಗೆ ಹೆಚ್ಚಿನ ಗಮನಹರಿಸಬೇಕು ಎಂದರು.
ಈ ಸಂದರ್ಭದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವೆಂಕಟಶಿವಾರೆಡ್ಡಿ, ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಎಚ್.ಸಿ.ಮುನಿರಾಜು ಉಪನ್ಯಾಸಕರಾದ ಡಿ.ಲಕ್ಷ್ಮಯ್ಯ ರಮೇಶ್, ಶ್ರೀಧರ್, ಅರ್ಚನಕುಮಾರಿ, ಶಮ ಹಾಗೂ ನವೀನ್ ಹಾಜರಿದ್ದರು.