Home News ಯೋಗದಿಂದ ಮಾನಸಿಕ ಮತ್ತು ಶಾರೀರಿಕ ಆರೋಗ್ಯ ಸಂವರ್ಧನೆ ಸಾಧ್ಯ

ಯೋಗದಿಂದ ಮಾನಸಿಕ ಮತ್ತು ಶಾರೀರಿಕ ಆರೋಗ್ಯ ಸಂವರ್ಧನೆ ಸಾಧ್ಯ

0
Sugaturu Yoga day Celebration

Sugaturu, Sidlaghatta : ಯೋಗದಿಂದ ಮಾನಸಿಕ ಮತ್ತು ಶಾರೀರಿಕ ಸಾಧನೆ ಸಾಧ್ಯವಾಗಿ ಆರೋಗ್ಯ ಸಂವರ್ಧನೆ ಸುಲಭವಾಗಬಲ್ಲದು. ಯೋಗವು ಭಾವನಾತ್ಮಕ ಚೈತನ್ಯವನ್ನು ಒದಗಿಸಿ ಆಧ್ಯಾತ್ಮಿಕ ಸಾಧನೆಗೆ ಪೂರಕವಾಗಿ ಎಡೆಮಾಡಿಕೊಡುತ್ತದೆ ಎಂದು ರೋಟರಿ ವಿಜಯಪುರ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ ತಿಳಿಸಿದರು.

ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ರೋಟರಿ ವಿಜಯಪುರ, ಜೇಸಿಐ ದೇವನಹಳ್ಳಿ ಡೈಮಂಡ್ಸ್, ರಾಷ್ಟ್ರೀಯ ಯುವಯೋಜನೆಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಯೋಗದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯೋಗಾಭ್ಯಾಸವೆಂಬುದು ಕೇವಲ ಆಸನ ಅಥವಾ ಪ್ರಾಣಾಯಾಮಗಳಿಗೆ ಮೀಸಲಾಗದೇ ಭೌದ್ಧಿಕ ಮತ್ತು ಅಧ್ಯಾತ್ಮಿಕ ಬೆಳವಣಿಗೆಯ ಹಾದಿಯಾಗಿದೆ. ಯೋಗಶಿಕ್ಷಣವು ಇಡೀ ವಿಶ್ವದ ಮಾನವಕೋಟಿಗೆ ಭಾರತದ ಅತ್ಯಮೂಲ್ಯವಾದ ಕೊಡುಗೆಯಾಗಿದೆ ಎಂದರು.

ಜೇಸಿಐ ದೇವನಹಳ್ಳಿ ಡೈಮಂಡ್ಸ್ ಅಧ್ಯಕ್ಷ ಜಿ.ಎನ್.ಪ್ರಶಾಂತ್ ಮಾತನಾಡಿ, ವಿದ್ಯಾರ್ಥಿಗಳು ಅಧ್ಯಯನದಲ್ಲಿ ಏಕಾಗ್ರತೆಯನ್ನು ಸಾಧಿಸಿ ಮಾನಸಿಕ ಮತ್ತು ದೈಹಿಕ ಸದೃಢತೆ ಕಾಯ್ದುಕೊಳ್ಳಲು ಯೋಗವೊಂದು ದೈನಿಕ ಚಟುವಟಿಕೆಯಾಗಿಸಿಕೊಳ್ಳಬೇಕು ಎಂದರು.

ಸೂಲಿಬೆಲೆಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಸ್ವಯಂಸೇವಕ, ಯೋಗಪಟು ಎ.ಎಂ.ಪುನೀತ್ ಮಾತನಾಡಿ, ಒತ್ತಡದ ಬದುಕಿನ ಮಧ್ಯೆ ಮಾನಸಿಕ ಶಾಂತಿ ಕಾಯ್ದುಕೊಳ್ಳಲು ಯೋಗ ಸಹಕಾರಿ. ತನ್ನ ಕಾಯಕದಲ್ಲಿ ಶಾಂತಿ, ಸಹನೆ ಹೊಂದಿ ಸಂಕಲ್ಪಶಕ್ತಿ, ಇಚ್ಚಾಶಕ್ತಿಯನ್ನು ವೃದ್ಧಿಸಿಕೊಳ್ಳಲು ಯೋಗವನ್ನು ಆಚರಣೆಯಲ್ಲಿರಿಸಿಕೊಳ್ಳಬೇಕು ಎಂದರು.

ವಿದ್ಯಾರ್ಥಿಗಳಿಗೆ ರೋಟರಿ ವಿಜಯಪುರ ಪ್ರಕಟಿತ “ನವಪೀಳಿಗೆಗೆ ಕೆಲವು ಮೌಲ್ಯಗಳು” ಕಿರುಹೊತ್ತಿಗೆಗಳನ್ನು ವಿದ್ಯಾರ್ಥಿಗಳಿಗೆ ರೋಟರಿ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ ವಿತರಿಸಿದರು.

ಯೋಗಪಟು ಪುನೀತ್ ಅವರ ಮಾರ್ಗದರ್ಶನದಲ್ಲಿ ಶಾಲಾ ವಿದ್ಯಾರ್ಥಿಗಳು ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿದರು. ರಾಷ್ಟ್ರೀಯ ಯುವಯೋಜನೆಯ ಸಂಯೋಜಕ ಡಾ.ವಿ.ಪ್ರಶಾಂತ್, ಗ್ರಾಮಪಂಚಾಯಿತಿ ಸದಸ್ಯ ಎ.ಸತೀಶ್, ಗ್ರಾಮಸ್ಥ ಚಿಕ್ಕಮುನಿವೆಂಕಟಶೆಟ್ಟಿ, ಶಿಕ್ಷಕರು ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version