ಶಿಡ್ಲಘಟ್ಟ ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನೆಹರು ಯುವಕೇಂದ್ರ, ಕರ್ನಾಟಕ ಗಾಂಧಿಸ್ಮಾರಕ ನಿಧಿ, ಗುಡುವನಹಳ್ಳಿ ಮಾರುತಿ ಯುವಜನ ಸೇವಾಂಘಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ದಂಡಿ ಸತ್ಯಾಗ್ರಹ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿದರು.
ಸ್ವಾತಂತ್ರ್ಯ ಹೋರಾಟ, ಚಳವಳಿ, ಶಾಂತಿ ಮತ್ತು ಅಹಿಂಸಾಮೌಲ್ಯಗಳ ಬಗ್ಗೆ ವಸ್ತುನಿಷ್ಟವಾಗಿ ಬೋಧಿಸಬೇಕು. ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ಅರಿತುಕೊಳ್ಳಬೇಕಿದೆ.
ಶಾಲೆಗಳಲ್ಲಿ ಎಳೆಯ ವಯಸ್ಸಿನಿಂದಲೇ ಮಕ್ಕಳಲ್ಲಿ ತ್ಯಾಗ, ಬಲಿದಾನದ ಪರಂಪರೆಯ ಬಗೆ ತಿಳಿಸುವ ಮೂಲಕ ರಕ್ತದ ಕಣಕಣದಲ್ಲಿಯೂ ದೇಶಾಭಿಮಾನ, ರಾಷ್ಟ್ರಪ್ರೇಮವನ್ನು ಬಿತ್ತಬೇಕು. ಭವ್ಯಪರಂಪರೆ, ಇತಿಹಾಸ, ಬೃಹತ್ ಸಾಂವಿಧಾನಿಕ ನಿಯಮಗಳನ್ನು ಹೊಂದಿರುವ ಗಣತಂತ್ರ ರಾಷ್ಟ್ರದಲ್ಲಿ ಶಾಂತಿಯ ನೆಲೆಯನ್ನು ಕೆದಕಲು ನಡೆಸುವ ಎಲ್ಲಾ ಪ್ರಯತ್ನಗಳನ್ನೂ ಹತ್ತಿಕ್ಕಬೇಕು ಎಂದು ಅವರು ತಿಳಿಸಿದರು.
ನೆಹರು ಯುವಕೇಂದ್ರದ ಸಂಯೋಜಕ ವಿ.ಪ್ರಶಾಂತ್ ಮಾತನಾಡಿ, ಪ್ರತಿಯೊಬ್ಬ ಪ್ರಜೆಯೂ ಸಂವಿಧಾನವನ್ನು ಗೌರವಿಸಬೇಕು. ತಮ್ಮ ಜವಾಬ್ದಾರಿಯನ್ನು ಅರಿತು ರಾಷ್ಟ್ರದ ಪ್ರಗತಿಯಲ್ಲಿ ಕೈಜೋಡಿಸಬೇಕು. ಸ್ವಾತಂತ್ರ್ಯ ತಂದು ಕೊಡಲು ತ್ಯಾಗ ಬಲಿದಾನ ಮಾಡಿದವರನ್ನು ಸ್ಮರಿಸಬೇಕು. ಯುವಪೀಳಿಗೆಯಲ್ಲಿ ದೇಶ ಭಕ್ತಿ, ರಾಷ್ಟ್ರ ಪ್ರೇಮ, ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳುವಂತಹ ಗುಣಗಳನ್ನು ಕಲಿಸಬೇಕಿದೆ ಎಂದರು.
ದಂಡಿ ಸತ್ಯಾಗ್ರಹ ಸ್ಮರಣೆಯಲ್ಲಿ ಮಕ್ಕಳಿಂದ ಜಾಥಾ ನಡೆಯಿತು. ಮಕ್ಕಳಿಗಾಗಿ ಚಿತ್ರಕಲೆ, ಪ್ರಬಂಧ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಗ್ರಾಮದ ಹಿರಿಯರಾದ ದೊಡ್ಡಮುನಿವೆಂಕಟಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ಎಸ್.ಆರ್.ಜಗದೀಶ್, ಮುಖ್ಯಶಿಕ್ಷಕಿ ಉಮಾದೇವಿ, ಶಿಕ್ಷಕ ಎ.ಬಿ.ನಾಗರಾಜ, ಬಿ.ನಾಗರಾಜು, ಲಕ್ಷ್ಮಯ್ಯ, ಶಿಕ್ಷಕಿ ತಾಜೂನ್, ಎನ್‌ಎಸ್‌ಎಸ್ ಸ್ವಯಂಸೇವಕ ಎನ್.ದಿಲೀಪ್ ಹಾಜರಿದ್ದರು.