Sidlaghatta : ಕಾನೂನನ್ನು ಯಾರು ಗೌರವಿಸಿ ಪಾಲಿಸುತ್ತಾರೋ, ಸಮಾಜದಲ್ಲಿ ಸಂವಿಧಾನದ ಆಶಯಗಳಿಗೆ ತಕ್ಕಂತೆ ನಡೆದುಕೊಳ್ಳುತ್ತಾರೋ ಅವರೆಲ್ಲರಿಗೂ ಕಾನೂನಿನ ರಕ್ಷಣೆ ಇರುತ್ತದೆ, ಸಮಾಜದಲ್ಲಿ ಉತ್ತಮ ಹೆಸರು ಗೌರವ ಸಲ್ಲುತ್ತದೆ ಎಂದು ಶಿಡ್ಲಘಟ್ಟ ನಗರಠಾಣೆಯ ಎಸ್‌ಐ ವೇಣುಗೋಪಾಲ್ ತಿಳಿಸಿದರು.
ಶಾಲಾ ಮಕ್ಕಳಿಗೆ ಪೊಲೀಸ್ ಠಾಣೆಯ ಕಾರ್ಯವೈಖರಿ ಬಗ್ಗೆ ತಿಳಿಸಿಕೊಡುವ “ತೆರೆದ ಮನೆ” ಯೋಜನೆಯಡಿ ಶಾಲಾ ಮಕ್ಕಳನ್ನು ಠಾಣೆಗೆ ಕರೆಸಿಕೊಂಡು ಅವರಿಗೆ ಠಾಣೆಯಲ್ಲಿನ ಪೊಲೀಸರ ಕಾರ್ಯವೈಖರಿ, ಮಕ್ಕಳ ಹಕ್ಕುಗಳ ರಕ್ಷಣೆ, ಫೋಕ್ಸೊ ಕಾಯಿದೆ ಕುರಿತು ಅರಿವು ಮೂಡಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ವಿನಾಕಾರಣ ಪೊಲೀಸರ ಬಗ್ಗೆ ಅನೇಕ ತಪ್ಪು ಕಲ್ಪನೆಗಳು ಇವೆ. ಅವುಗಳನ್ನು ಹೋಗಲಾಡಿಸಿ ಜನಸ್ನೇಹಿಯಾಗಿ ಕಾರ್ಯನಿರ್ವಹಿಸುವುದೆ ನಮ್ಮ ಇಲಾಖೆಯ ಮುಖ್ಯ ಹಾಗೂ ಮೊದಲ ಉದ್ದೇಶ ಎಂದು ಅವರು ವಿವರಿಸಿದರು.
ಶಾಲಾ ಮಕ್ಕಳು ತಮ್ಮ ಓದಿನ ಜತೆಗೆ ಸಂವಿಧಾನದಲ್ಲಿನ ಕಾನೂನುಗಳನ್ನು ತಿಳಿದುಕೊಂಡರೆ ಮುಂದೆ ಯಾವುದೆ ರೀತಿಯ ಕಾನೂನಿನ ಕುಣಿಗೆ ಸಿಕ್ಕಿಕೊಳ್ಳುವುದಿಲ್ಲ ಮತ್ತು ಕಾನೂನನ್ನು ಕೈಗೆ ಎತ್ತಿಕೊಳ್ಳುವಂತ, ಅಪರಾಧಗಳಲ್ಲಿ ತೊಡಗುವುದಿಲ್ಲ ಎಂದರು.
ಅನ್ಯಾಯಕ್ಕೆ ಒಳಗಾದವರು ನ್ಯಾಯಕ್ಕಾಗಿ ನಮ್ಮ ಠಾಣೆಗೆ ಬಂದರೆ ಮೊದಲು ದೂರನ್ನು ತೆಗೆದುಕೊಳ್ಳುವುದು, ಎಫ್‌ಐಆರ್ ದಾಖಲಿಸುವುದು, ತನಿಖೆ ನಡೆಸುವುದು, ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸುವುದು, ಅಪರಾಧಗಳನ್ನು ಬಯಲಿಗೆ ಎಳೆಯಲು ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಬಗೆ..ಹೀಗೆ ಹತ್ತು ಹಲವು ವಿಚಾರಗಳನ್ನು ತಿಳಿಸಿಕೊಟ್ಟರು.
ಮಹಿಳಾ ಪೇದೆ ಅನಿತ ಮಾತನಾಡಿ, ಶಾಲೆಗಳಲ್ಲಿ, ಮನೆಯಲ್ಲಿ ಅಥವಾ ಹೊರಗೆ ನಿಮ್ಮ ಪರಿಚಿತರು, ಸಂಬಂಧಿಕರು, ಶಿಕ್ಷಕರು, ಅಪರಿಚಿತರು ಅಥವಾ ಯಾರೇ ಆಗಲಿ ನಿಮಗೆ ಆಮಿಷ ನೀಡಿ, ಒತ್ತಾಯ ಮಾಡಿ ಮಾಡುವ ಗುಡ್ ಟಚ್ ಮತ್ತು ಬ್ಯಾಡ್ ಟಚ್ ಬಗ್ಗೆ ಗಮನ ಇರಬೇಕು. ಇಂತಹ ಪರಿಸ್ಥಿತಿಗಳಲ್ಲಿ ಮುಕ್ತವಾಗಿ ಸಮಸ್ಯೆಯನ್ನು ನಿಮ್ಮ ಹೆತ್ತವರು, ಸ್ನೇಹಿತರಲ್ಲಿ ಹೇಳಿಕೊಳ್ಳಿ ಇದರಿಂದ ಸಮಸ್ಯೆಗೆ ಸಿಲುಕುವುದನ್ನು ತಪ್ಪಿಸಿಕೊಳ್ಳಬಹುದು, ಎಂತಹ ಪರಿಸ್ಥಿತಿಯಲ್ಲೂ ಸಹ ನಿಮ್ಮೊಂದಿಗೆ ನಮ್ಮ ಪೊಲೀಸರು ಇರುತ್ತಾರೆ ಎಂದು ಭರವಸೆ ನೀಡಿದರು.
ಶ್ರೀ ಸರಸ್ವತಿ ವಿದ್ಯಾಸಂಸ್ಥೆಯ ಐವತ್ತು ಮಂದಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು, ಶಾಲೆಯ ಶಿಕ್ಷಕ ಪ್ರಕಾಶ್ ನಂದೀಹಳ್ಳಿ ಅವರೊಂದಿಗೆ ಪೊಲೀಸ್ ಠಾಣೆಯಲ್ಲಿ ವಿವಿಧ ಮಾಹಿತಿ ಪಡೆದರು.
ನಗರಠಾಣೆಯ ಸಿಬ್ಬಂದಿ ಶಿವಕುಮಾರ್, ಮಸೂದ್, ಮಂಜುನಾಥ್, ಅನೀತಾ, ಬಿ.ಆರ್.ಪ್ರಕಾಶ್ ಹಾಜರಿದ್ದರು.