ಪರೀಕ್ಷೆ ಎಂಬುದು ಯುದ್ಧವಲ್ಲ, ಇಂದು ಒಂದು ಹಬ್ಬವಾಗಿದೆ. ಹಬ್ಬವನ್ನು ಸಂಭ್ರಮಿಸಲು ಹೇಗೆ ಸಿದ್ಧಮಾಡಿಕೊಳ್ಳುತ್ತೀರೋ ಹಾಗೆ ಪರೀಕ್ಷೆಗೆ ಎಂಜಾಯ್ ಮಾಡ್ತಾ ಸಿದ್ದರಾಗಿ ಎಂದು ಭಾರತ ಸರ್ಕಾರದ ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಡಾ.ಎಂ. ಶಿವಕುಮಾರ್ ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಕರ್ನಾಟಕ ಜಾನಪದ ಪರಿಷತ್ ವತಿಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಶನಿವಾರ “ಎಸ್ಸೆಸ್ಸೆಲ್ಸಿ ಪಬ್ಲಿಕ್ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸುವುದು ಹೇಗೆ?” ಎಂಬ ವಿಷಯವಾಗಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿ, ಪರೀಕ್ಷೆಯ ಕುರಿತಾತ ಆತಂಕವನ್ನು ದೂರ ಮಾಡಲು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಅವರು ಮಾತನಾಡಿದರು.
ಈ ಪರೀಕ್ಷೆ ನಿಮ್ಮ ಜೀವನದ ಗುರಿಗಳನ್ನು ಸಾಧಿಸಲು ಪ್ರಥಮ ಹೆಜ್ಜೆ ಯಾಗಿದ್ದು, ಇಡುವ ಪ್ರಥಮ ಹೆಜ್ಜೆ ಯಲ್ಲಿಯೇ ಇತಿಹಾಸ ನಿರ್ಮಿಸಬೇಕು. ನಾವು ಹೇಗೆ ಓದಿದ್ದೇವೋ ಅದು ಮುಖ್ಯವಲ್ಲ, ಹೇಗೆ ಪರೀಕ್ಷೆ ಯಲ್ಲಿ ಉತ್ತರಿಸುತ್ತೇವೋ ಅದು ಮುಖ್ಯ. ಆದ್ದರಿಂದ ಪ್ರಶ್ನೆಗಳಿಗೆ ನಿಖರವಾಗಿ, ಸ್ಪಷ್ಟವಾಗಿ, ಅಕ್ಷರಗಳು ಸ್ಪುಟವಾಗಿ ಕಾಣುವಂತೆ ಉತ್ತರಿಸಿ, ಶೇಕಡ 100ಕ್ಕೆ 100ರಷ್ಷು ಅಂಕವನ್ನು ಪಡೆಯಿರಿ ಎಂದು ನುಡಿದರು.
ತಾನು ಏನಾಗಬೇಕು ಎಂಬುದರ ಕುರಿತು ಸದಾ ಜಪ ಮಾಡಬೇಕು, ಕನಸು ಕಾಣಬೇಕು. ಕನಸನ್ನು ಗುರಿಯಾಗಿ ಪರಿವರ್ತಿಸಿಕೊಳ್ಳಬೇಕು. ಮಾನಸಿಕವಾಗಿ ನಮ್ಮ ಗುರಿಯೆಡೆಗೆ ಸಾಗುವ ಹಾದಿಯಲ್ಲಿರಬೇಕು. ಅಚಲವಾದ ಆತ್ಮವಿಶ್ವಾಸ ಬೆಳೆಸಿಕೊಳ್ಳಿ. ನಮ್ಮ ಮೇಲೆ ನಮಗೆ ನಂಬಿಕೆ ಇದ್ದರೆ ಏನನ್ನಾದರೂ ಸಾಧಿಸಲಿಕ್ಕೆ ಸಾದ್ಯವಿದೆ. ಸದಾ ಜಾಗೃತರಾಗಿರಿ. ನಿಮ್ಮನ್ನು ನೀವು ಅರಿಯಿರಿ. ಪರೀಕ್ಷೆ ಎಂಬುದು ಯುದ್ದವಲ್ಲ ಇದು ಒಂದು ಆಟ. ಕ್ರೀಡಾಸ್ಫೂರ್ತಿಯಿಂದ ಈ ಆಟವನ್ನು ನಿಯಮಗಳನ್ನು ಅರಿತು ಆಡಿ. ಏಕಾಗ್ರತೆಯಿಂದ ಅದ್ಬುತವಾದ ಜ್ಞಾಪಕ ಶಕ್ತಿ ನಿಮ್ಮದಾಗುತ್ತದೆ. ಪರಿಣಾಮಕಾರಿ ಅಭ್ಯಾಸ ಮಾಡಬೇಕು ಎಂದು ವಿವಿಧ ವ್ಯಕ್ತಿ, ವಸ್ತುಗಳ ಉದಾಹರಣೆಗಳ ಮೂಲಕ ವಿವರಿಸಿದರು.
ಗಣಿತ ಲೆಕ್ಕದ ಪಕ್ಕದಲ್ಲಿ ಪ್ರತಿಯೊಂದು ಹಂತವನ್ನು ಗುರುತಿಸಿ. ಎರಡು ಇಷ್ಟವಾದ ವಿಷಯಗಳ ಮಧ್ಯೆ ಕಷ್ಟವಾದ ವಿಷಯ ಓದಿ. ಅದನ್ನು ಸ್ಯಾಂಡ್ ವಿಚ್ ಟೆಕ್ನಿಕ್ ಎನ್ನುತ್ತಾರೆ. ರೀಡಿಂಗ್, ರೀಕಾಲ್, ರಿಜಿಸ್ಟರ್ ತಂತ್ರವನ್ನು ನಿಮ್ಮದಾಗಿಸಿಕೊಳ್ಳಿ ಎಂದು ಸ್ಲೈಡ್ ಶೋ ಮೂಲಕ ವಿದ್ಯಾರ್ಥಿಗಳಿಗೆ ಅಗತ್ಯ ಅಂಶಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು. ಸಮಯದ ಸದುಪಯೋಗ, ಪ್ರಶ್ನೋತ್ತರ ವಿಧಾನ, ಗಣಿತದ ವಿಷಯದ ಅನುಮಾನಗಳು, ಚಿತ್ರಸಹಿತ ಬರೆಯಬೇಕಾದ ಅಗತ್ಯ ಮುಂತಾದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಪ್ರಶ್ನೆ ಕೇಳಿ ಉತ್ತರ ಪಡೆದರು.
ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿ, ಸಮರ್ಥ ಸಂಪನ್ಮೂಲ ವ್ಯಕ್ತಿಯ ಮೂಲಕ ವಿದ್ಯಾರ್ಥಿಗಳಲ್ಲಿ ಸಾಮಾನ್ಯವಾಗಿ ಮನೆಮಾಡಿರುವ ಪರೀಕ್ಷೆಯ ಭಯ ಹೋಗಲಾಡಿಸುವುದು ಹಾಗೂ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿ ಹೆಚ್ಚು ಅಂಕಗಳನ್ನು ಗಳಿಸುವಂತೆ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಇಂದಿರಾಗಾಂಧಿ ವಸತಿ ಶಾಲೆಯ ಪ್ರಾಂಶುಪಾಲೆ ವಿಜಯಶ್ರೀ, ಶಿಕ್ಷಕರಾದ ಪ್ರಸಾದ್, ಶಶಿದೀಪಕ್, ಮಂಜುನಾಥ್, ಶಿವಚಂದ್ರಕುಮಾರ್, ನವೀನ್, ನರೇಶ್, ಮಂಜುಳಾ, ಕವಿತಾ, ನವ್ಯಾ, ಯಶೋದ ಹಾಜರಿದ್ದರು.