Mallur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಸಮೀಪದ ಶ್ರೀ ಸಾಯಿನಾಥ ಜ್ಞಾನ ಮಂದಿರದಲ್ಲಿ (Sri Sainatha Gnana Mandir) ದಸರಾ ಹಬ್ಬದ ಪ್ರಯುಕ್ತ ಹತ್ತು ದಿನಗಳ ಕಾಲ ಸತ್ಸಂಗವನ್ನು ಏರ್ಪಡಿಸಲಾಗಿದೆ.
ಸತ್ಸಂಗದಲ್ಲಿ ನಾಗೇಂದ್ರಕುಮಾರ್ ಅಪ್ಪಾಜಿ ಸ್ವಾಮೀಜಿ ಪ್ರವಚನವನ್ನು ನೀಡಿ, ಜೀವನದಲ್ಲಿ ಉತ್ತಮ ಸಾಧನೆ ಮಾಡುವಲ್ಲಿ ನಮ್ಮ ಪ್ರಯತ್ನದೊಂದಿಗೆ ಗುರುವಿನ ಮಾರ್ಗದರ್ಶನ ಪ್ರೇರಣೆ ಅಗತ್ಯ.ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ಹಿಂದೆ ಗುರು ಮುಂದೆ ಗುರಿ ಇರಬೇಕು ಎಂದರು.
ದೇಶದಲ್ಲಿ ಗುರುವಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಅನಿಶ್ಚಿತ ಬದುಕಲ್ಲಿ ಜೀವನದ ಸಾರ್ಥಕತೆ ಕಾಣಲು ಪ್ರತಿಯೊಬ್ಬರು ಗುರುವಿನ ಮಾರ್ಗದರ್ಶನ ಪಡೆಯವುದು ಅತ್ಯಗತ್ಯ. ಮಾನವ ಜನ್ಮ ಶ್ರೇಷ್ಠವಾದದ್ದು, ಅದನ್ನು ಕೇವಲ ಲೌಕಿಕ ಸುಖಕ್ಕಾಗಿ ಬಲಿಕೊಡದೆ ಗುರು ತೋರಿದ ಮಾರ್ಗದಲ್ಲಿ ನಡೆದರೆ ಸಂತಸದ ಬದುಕು ಸಾಗಿಬಹುದಾಗಿದೆ ಎಂದರು.
ಪರಿಪೂರ್ಣ ಜೀವನಕ್ಕೆ ಗುರುವಿನ ಅನುಗ್ರಹ, ಮಾರ್ಗದರ್ಶನ ಬೇಕು. ತನುವಿಗೆ ಅನ್ನ, ಮನಕ್ಕೆ ಜ್ಞಾನ ಹಾಗೂ ಆತ್ಮಕ್ಕೆ ಧ್ಯಾನದ ಅತ್ಯಗತ್ಯ. ನಶ್ವರವಾದ ಈ ಜೀವನದಲ್ಲಿ ಎಲ್ಲರೂ ಶೂನ್ಯ. ಮನೆ, ಅಧಿಕಾರ, ಕೀರ್ತಿ, ಹಣ ಯಾವುದಕ್ಕೂ ಬೆಲೆ ಇಲ್ಲ. ಆದರೆ ಆ ಶೂನ್ಯಕ್ಕೆ ಬೆಲೆ ಬರಬೇಕಾದರೆ ಗುರು ಎಂಬ ಒಂದಂಕಿ ಬೇಕೇಬೇಕು. ಮನಸ್ಸಿನ ಮಲಿನ ತೊಳೆದು ಪರಿಶುದ್ಧತೆಯಡೆಗೆ ನಡೆಸುವಾತನೇ ನಿಜವಾದ ಗುರು ಎಂದು ಹೇಳಿದರು.
“ನವರಾತ್ರಿಯ ಪ್ರತಿ ದಿನವೂ ಬಾಬಾರವರಿಗೆ ಅಭಿಷೇಕ, ಅಲಂಕಾರ, ಪೂಜೆ ಮತ್ತು ಹೋಮಗಳನ್ನು ನಡೆಸಲಾಗುತ್ತಿದೆ. ಪ್ರಸಾದ ವಿನಿಯೋಗ ನಡೆಯುತ್ತಿದೆ. ಭಕ್ತರಿಗೆ ಲಲಿತಾ ಸಹಸ್ರನಾಮ, ಗಾಯಿತ್ರಿ ಮಂತ್ರ, ವಿಷ್ಣು ಸಹಸ್ರನಾಮ ಕಲಿಸುತ್ತಾ ಶ್ರೀಚಕ್ರ ಕುಂಕುಮಾರ್ಚನೆ ಮಾಡಲಾಗುತ್ತಿದೆ. ಬಳ್ಳಾರಿ, ಗುಲ್ಬರ್ಗಾ, ಚಿಕ್ಕಮಗಳೂರು, ಹಾಸನ, ಚಿತ್ರದುರ್ಗ, ಕೇರಳ, ತಮಿಳುನಾಡು, ನೇಪಾಳ, ಮುಂಬೈನಿಂದ ಭಕ್ತರು ಆಗಮಿಸಿ ಇಲ್ಲಿತೇ ತಂಗಿದ್ದಾರೆ. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪೂಜೆ, ಸತ್ಸಂಗದಲ್ಲಿ ಪಾಲ್ಗೊಳ್ಳುತ್ತಿದ್ದಾರೆ” ಎಂದು ದೇವಾಲಯದ ಮುಖ್ಯಸ್ಥ ನಾರಾಯಣಸ್ವಾಮಿ ತಿಳಿಸಿದರು.