ತಾಲ್ಲೂಕಿನ ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಜಂಗಮಕೋಟೆ ಗ್ರಾಮ ಪಂಚಾಯಿತಿ ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಹಯೋಗದೊಂದಿಗೆ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಅಂಗವಾಗಿ ಹೆಣ್ಣು ಮಕ್ಕಳಿಗಾಗಿ ಆಯೋಜಿಸಲಾಗಿದ್ದ ವಿವಿಧ ಕ್ರೀಡಾ ಚಟುವಟಿಕೆಗಳು ಮತ್ತು ಸ್ಪರ್ಧೆಗಳಿಗೆ ಚಾಲನೆ ನೀಡಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ ಸಂಸ್ಥೆಯ ಕಾರ್ಯದರ್ಶಿ ಸಿ.ಬಿ. ಪ್ರಕಾಶ್ ಮಾತನಾಡಿದರು.
ಪ್ರತಿಯೊಂದು ಹೆಣ್ಣು ಸಹ ಸಾಧಕಿಯರೇ. ಈ ಪುರುಷ ಪ್ರಧಾನ ಸಮಾಜದಲ್ಲಿ ಎಲ್ಲವನ್ನೂ ಮೆಟ್ಟಿನಿಂತು ಪ್ರತಿಯೊಂದು ಕ್ಷೇತ್ರದಲ್ಲೂ ನಮ್ಮ ಹೆಣ್ಣುಮಕ್ಕಳು ಸಾಧನೆಯನ್ನು ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.
ಒಲಿದರೆ ಮಾತೆಯಾಗುವ, ಮುನಿದರೆ ಮಾರಿಯಾಗುವ ಹೆಣ್ಣುಮಗಳ ಇರವು- ಅರಿವುಗಳನ್ನು ನೆನಪಿಸಿಕೊಳ್ಳುವ ದಿನವೇ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ. ಹೆಣ್ಣು ಮಕ್ಕಳಿಗೆ ರಕ್ಷಣೆ ಮತ್ತು ಅವಕಾಶಗಳನ್ನು ನೀಡುವುದರ ಜೊತೆಗೆ ಹೆಣ್ಣು ಮಕ್ಕಳು ಸಮಾಜದಲ್ಲಿ ಅನುಭವಿಸುವ ತೊಂದರೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಭಾರತದಲ್ಲಿ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ ಎಂದರು.
ಓಟದ ಸ್ಪರ್ಧೆ, ಗೋಣಿಚೀಲ ಧರಿಸಿ ಓಟ, ರಂಗೋಲಿ, ಚಿತ್ರಕಲೆ ಮತ್ತು ಪದ್ಯವಾಚನ ಸ್ಪರ್ಧೆಗಳನ್ನು ನಡೆಸಲಾಯಿತು. ವಿಜೇತರಿಗೆ ಜನವರಿ 24 ರಂದು ನಡೆಯಲಿರುವ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಕಾರ್ಯಕ್ರಮದಲ್ಲಿ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿಸ್ತರಿಸಲಾಗುವುದು.
ಜಂಗಮಕೋಟೆ ಸರಾಸರಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ರಾಜೇಶ್ವರಿ, ಗ್ರಾಮ ಪಂಚಾಯಿತಿ ಪಿ.ಡಿ.ಓ ವಜ್ರೇಶ್ ಕುಮಾರ್, ಶಿಕ್ಷಕರಾದ ಎಂ.ನಾರಾಯಣಸ್ವಾಮಿ, ಡಿ.ನಾಗರತ್ನ, ಜಿ.ಎನ್.ಲತಾ, ಮೇಘಾ, ಜ್ಯೋಶಿ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಜೆ.ಎಂ.ಕೃಷ್ಣಪ್ಪ, ವಿಶ್ವನಾಥ್, ದೈಹಿಕ ಶಿಕ್ಷಕ ವಿಜಯಕುಮಾರ್ ಹಾಜರಿದ್ದರು.