ಕೊರೊನಾ ಲಾಕ್ ಡೌನ್ ನಿಂದಾಗಿ ದುಡಿಮೆಯಿಲ್ಲದೆ, ಜೀವನ ನಡೆಸಲು ಒಪ್ಪೊತ್ತಿನ ಊಟಕ್ಕೂ ಕಷ್ಟಪಡುತ್ತಿರುವ ಅಂಗವಿಕಲರು, ವೃದ್ಧರು, ಎಚ್.ಐ.ವಿ ಪೀಡಿತರು, ಶೋಷಿತ ಮಹಿಳೆಯರು, ವಲಸೆ ಕಾರ್ಮಿಕರು, ಮುಂತಾದ ಬಡವರಿಗೆ ನೆರವಾಗಲು ಕರ್ನಾಟಕ ವಿಶೇಷಚೇತನರ ಸಂಸ್ಥೆ ಮುಂದಾಗಿದೆ.
ಸರ್ಕಾರ ಹಾಗೂ ಸಂಘಸಂಸ್ಥೆಗಳ ನೆರವಿಗಾಗಿ ಎದುರು ನೋಡುವ ಅಂಗವಿಕಲರು ಈಗ ಕೊರೊನಾ ಸಂಕಷ್ಟದಲ್ಲಿರುವವರಿಗೆ ತಾವೇ ಖುದ್ದಾಗಿ ಹೋಗಿ ನೆರವಿನ ಹಸ್ತ ಚಾಚುತ್ತಿದ್ದಾರೆ. ಬಡವರ, ಕಷ್ಟದಲ್ಲಿರುವವರ ಹಸಿವನ್ನು ನೀಗಿಸುವ ನಿಟ್ಟಿನಲ್ಲಿ ಸಂಸ್ಥೆಯು ದಾನಿಗಳ ಹಾಗೂ ಸ್ನೇಹಿತರ ಸಹಾಯಪಡೆದು ದಿನಸಿ ಕಿಟ್ ನೀಡಲು ಮುಂದಾಗಿದೆ.
ತಾಲ್ಲೂಕಿನ ಅಬ್ಲೂಡು, ಮಳಮಾಚನಹಳ್ಳಿ ಹಾಗೂ ಆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗವಿಕಲರು, ವಯೋವೃದ್ಧರು ,ಎಚ್ಐವಿ ಸೋಂಕಿತರಿಗೆ ಭಾನುವಾರ ದಿನಬಳಕೆಯ ಆಹಾರ ಪದಾರ್ಥಗಳ ಕಿಟ್ ವಿತರಿಸಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಕಿರಣ್ ನಾಯಕ್, “ಕೊರೊನ ರೋಗ ದೇಶವ್ಯಾಪ್ತಿ ಹರಡಿದ್ದು ನಗರ ಪ್ರದೇಶ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ಅಂಗವಿಕಲರು ಜೀವನ ನಡೆಸಲು ಬಹಳ ಕಷ್ಟವಾಗಿದೆ. ಅದಕ್ಕಾಗಿ ನಮ್ಮ ಸಂಸ್ಥೆಯ ವತಿಯಿಂದ ಜಿಲ್ಲೆಯಾದ್ಯಂತ ಅಂಗವಿಕಲರ ಮನೆಗಳಿಗೆ ತೆರಳಿ ಅವರಿಗೆ ದಿನಬಳಕೆಯ ಆಹಾರ ಪದಾರ್ಥಗಳನ್ನು ವಿತರಿಸುವ ಕಾರ್ಯವನ್ನು ಕೈಗೊಂಡಿದ್ದೇವೆ. ಮುಂದಿನ ದಿನಗಳಲ್ಲಿ ದಾನಿಗಳು ಇನ್ನೂ ಹೆಚ್ಚಿನ ಸಹಕಾರ ನೀಡಿ ಅಂಗವಿಕಲರ ನೆರವಿಗೆ ನಿಲ್ಲಬೇಕಿದೆ” ಎಂದು ಅವರು ವಿನಂತಿಸಿದರು.
ಸಂಸ್ಥೆಯ ಅಧ್ಯಕ್ಷ ಕೆ.ಜಿ. ಸುಬ್ರಮಣಿ, ಶಿವು ,ವಿನೋದ್, ಸಿದ್ದು, ಸುಶೀಲಾ, ಆಬ್ಲೂಡು ಗ್ರಾಮ ಪಂಚಾಯಿತಿ ಸದಸ್ಯ ನಾರಾಯಣಸ್ವಾಮಿ ,ಮಳಮಾಚನಹಳ್ಳಿಗ್ರಾಮ ಪಂಚಾಯಿತಿ ಸದಸ್ಯ ಬೈರೇಗೌಡ,ಮುಖಂಡರಾದ ವೆಂಕಟೇಶ್, ನವೀನ್, ಆನೂರು ತಾರಾ ಆನಂದ್ ನರಸಿಂಹಮೂರ್ತಿ, ಗಂಗಮ್ಮ ಹಾಜರಿದ್ದರು.