ಶಿಡ್ಲಘಟ್ಟ ತಾಲ್ಲೂಕಿನ ಸೊಣ್ಣೇನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ೩೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಶಾಲೆಯಲ್ಲಿರುವ ಓರ್ವ ಶಿಕ್ಷಕಿಯ ಜೊತೆಗೆ ಮತ್ತೋರ್ವ ಶಿಕ್ಷಕರನ್ನು ನೇಮಿಸುವುದು ಸೇರಿದಂತೆ ಶಾಲೆಗೆ ಅಗತ್ಯವಿರುವ ಮೂಲಭೂತ ಸವಲತ್ತುಗಳನ್ನು ಕಲ್ಪಿಸುವಂತೆ ಶಾಲಾ ವಿದ್ಯಾರ್ಥಿಗಳು ಮನವಿ ಮಾಡಿದರು.
ಸರ್ಕಾರದ ಐದು ವರ್ಷಗಳ ಸಮಗ್ರ ಗ್ರಾಮೀಣಾಭಿವೃದ್ದಿ ದೂರದೃಷ್ಠಿ ಯೋಜನೆ ಹಾಗು ನಮ್ಮ ಗ್ರಾಮ ನಮ್ಮ ಯೋಜನೆಯ ಅಡಿಯಲ್ಲಿ ಗ್ರಾ.ಪಂ ಸಂಪನ್ಮೂಲ ವ್ಯಕ್ತಿಯೊಂದಿಗೆ ನಡೆಸಿದ ಶಾಲಾ ಶಿಕ್ಷಕ ಹಾಗು ಮಕ್ಕಳ ಗುಂಪು ಚರ್ಚೆಯಲ್ಲಿ ಸಮಸ್ಯೆಗಳ ಬಗ್ಗೆ ಮಕ್ಕಳು ಮಾತನಾಡಿದರು.
ತಾಲ್ಲೂಕಿನ ದೇವರಮಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೊಣ್ಣೇನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಕಟ್ಟಡ ಮಳೆಯಿಂದ ಹಾನಿಯಾಗಿದ್ದು ಕಟ್ಟಡ ದುರಸ್ತಿ ಸೇರಿದಂತೆ ಶಾಲೆಗೆ ನೂತನ ಶೌಚಾಲಯ ನಿರ್ಮಿಸಬೇಕು. ಶಾಲಾ ಮಕ್ಕಳಿಗೆ ಆಟದ ಮೈದಾನ ಸೇರಿದಂತೆ ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ನಡೆಸಬೇಕು. ಅಂಗನವಾಡಿಗೆ ಕಾಂಪೌಂಡ್ ನಿರ್ಮಾಣ ಮಾಡಿಕೊಡಲು ಗ್ರಾಮ ಪಂಚಾಯಿತಿ ಪ್ಲಾನ್ ಲಿಸ್ಟ್‌ನಲ್ಲಿ ಸೇರಿಸುವಂತೆ ಮನವಿ ಮಾಡಿದರು.
ಗ್ರಾ.ಪಂ ಸಂಪನ್ಮೂಲ ವ್ಯಕ್ತಿ ಚನ್ನಕೃಷ್ಣ ಮಾತನಾಡಿ ಶಾಲಾ ಶಿಕ್ಷಕ ಸಿಬ್ಬಂದಿ ಹಾಗು ಮಕ್ಕಳ ಗುಂಪು ಚರ್ಚೆಯಲ್ಲಿ ಚರ್ಚಿಸಲಾದ ಸ್ಥಳೀಯ ಸಮಸ್ಯೆಗಳನ್ನೆಲ್ಲಾ ಪಟ್ಟಿ ಮಾಡಿ ಗ್ರಾಮ ಪಂಚಾಯಿತಿ ದೂರದೃಷ್ಟಿ ಯೋಜನೆಯ ಸಭೆಯಲ್ಲಿ ಸೇರಿಸಲಾಗುವುದು ಎಂದರು.
ಗುಂಪುಚರ್ಚೆಯಲ್ಲಿ ಶಾಲಾ ಶಿಕ್ಷಕಿ ಅರುಣ, ಅಂಗನವಾಡಿ ಸಹಾಯಕಿ ಶಿಲ್ಪಾ, ಸಿಆರ್‌ಪಿ ಮಲ್ಲಿಕಾ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.