Sidlaghatta : ರೇಷ್ಮೆ ಇಲಾಖೆಯನ್ನು ಬೇರಾವುದೇ ಇಲಾಖೆಯ ಜೊತೆ ವಿಲೀನ ಮಾಡದೇ, ಹಾಲಿ ಇದೀಗ ಇರುವ ರೇಷ್ಮೆ ಇಲಾಖೆಯನ್ನಾಗಿಯೇ ಮುಂದುವರೆಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ಜಿಲ್ಲಾದ್ಯಕ್ಷ ಬೆಳ್ಳೂಟಿ ಮುನಿಕೆಂಪಣ್ಣ ಒತ್ತಾಯಿಸಿದರು.
ರೇಷ್ಮೆ ಕೃಷಿ ಹಾಗೂ ಪಶು ಸಂಗೋಪನೆ ಸಚಿವರಾದ ಕೆ.ವೆಂಕಟೇಶ್ ಅವರನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ಪದಾಧಿಕಾರಿಗಳೊಂದಿಗೆ ಬೆಂಗಳೂರಿನ ನಿವಾಸದಲ್ಲಿ ಗುರುವಾರ ಭೇಟಿ ಮಾಡಿ ಕ್ಷೇತ್ರದ ರೈತರು ಸೇರಿದಂತೆ ರೇಷ್ಮೆಗೆ ಸಂಬಂದಿಸಿದ ಸಮಸ್ಯೆಗಳ ಬಗ್ಗೆ ವಿವರಿಸಿದರು.
ಕ್ಷೇತ್ರದಲ್ಲಿ ಯಾವುದೇ ನೀರಿನ ಮೂಲಗಳಿಲ್ಲದಿದ್ದರೂ ಕೊಳವೆಬಾವಿಯನ್ನು ಆಧರಿಸಿ ಇಲ್ಲಿನ ಶೇ ೮೦ ರಷ್ಟು ರೈತರು ರೇಷ್ಮೆ ಹಾಗು ಹೈನುಗಾರಿಕೆಯನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಇಂತಹ ಸಂದರ್ಬದಲ್ಲಿ ರೇಷ್ಮೆ ಇಲಾಖೆಯನ್ನು ಬೇರೆ ಇಲಾಖೆಯೊಂದಿಗೆ ವಿಲೀನ ಗೊಳಿಸುವುದು ಸರಿಯಾದ ಕ್ರಮವಲ್ಲ. ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆಯನ್ನು ಹೈಟೆಕ್ ಮಾರುಕಟ್ಟೆ ಮಾಡಲು ಈ ಹಿಂದಿನ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದ್ದು ತ್ವರಿತವಾಗಿ ಹೈಟೆಕ್ ಮಾರುಕಟ್ಟೆ ನಿರ್ಮಾಣಕ್ಕೆ ಸ್ಥಳ ಗುರುತಿಸಿ ಕಾಮಗಾರಿಗೆ ಚಾಲನೆ ನೀಡಬೇಕು. ರೇಷ್ಮೆ ಬೆಳೆಗಾರರಿಗೆ ಮಿನಿ ಟ್ರಾಕ್ಟರ್, ಟಿಲ್ಲರ್, ಔಷಧಿ ಸಿಂಪಡಿಸುವ ಯಂತ್ರಗಳು ಸೇರಿದಂತೆ ಹಿಪ್ಪುನೇರಳೆ ಕಟಾವು ಮಾಡುವ ಯಂತ್ರಗಳನ್ನು ಸಹಾಯಧನದ ರೂಪದಲ್ಲಿ ವಿತರಿಸಬೇಕು. ಹುಳು ಮನೆ ನಿರ್ಮಾಣಕ್ಕೆ ಇಲಾಖೆ ನೀಡುತ್ತಿರುವ ಪ್ರೋತ್ಸಾಹಧನವನ್ನು ಹೆಚ್ಚಿಸಬೇಕು. ರೇಷ್ಮೆ ಬೆಳೆಗಾರರ ಮತ್ತು ಉದ್ದಿಮೆದಾರರ ಅಭಿವೃದ್ಧಿ ಗೆ ಪೂರಕವಾಗಿರುವಂತಹ ತೀರ್ಮಾನಗಳನ್ನು ತೆಗೆದುಕೊಳ್ಳಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ತಾಲ್ಲೂಕು ಅಧ್ಯಕ್ಷ ಎ.ಎನ್.ಮುನೇಗೌಡ, ಕಾರ್ಯದರ್ಶಿ ನವೀನ್, ಪದಾಧಿಕಾರಿಗಳಾದ ನಾಗೇಶ್, ಕೇಶವ, ಅರುಣ್ ಮತ್ತಿತರರು ಹಾಜರಿದ್ದರು.