Sidlaghatta : ರೇಷ್ಮೆಗೂಡು ಇ-ಹರಾಜಿನ ಸಮಯದಲ್ಲಿ ಆಗುತ್ತಿರುವ ತಾಂತ್ರಿಕ ಸಮಸ್ಯೆಯನ್ನು ಒಂದು ತಿಂಗಳಲ್ಲಿ ಸರಿಪಡಿಸುವುದಾಗಿ ರೇಷ್ಮೆ ಇಲಾಖೆ ಆಯುಕ್ತ ರಾಜೇಶ್‌ಗೌಡ ಅವರು ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ ಭರವಸೆ ನೀಡಿದರು.
ಶಿಡ್ಲಘಟ್ಟ ನಗರದ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಗೆ ಗುರುವಾರ ಭೇಟಿ ನೀಡಿದ್ದ ಅವರು ತಮ್ಮನ್ನು ಭೇಟಿ ಮಾಡಿದ ರೀಲರುಗಳಿಗೆ ಇ ಹರಾಜಿನ ವೇಳೆ ಕೊನೆಯ 30 ರಿಂದ 40 ಸೆಕೆಂಡ್ ಗಳಲ್ಲಿ ಆಗುತ್ತಿರುವ ತಾಂತ್ರಿಕ ಸಮಸ್ಯೆಯನ್ನು ಒಂದು ತಿಂಗಳಲ್ಲಿ ಸರಿಪಡಿಸುವುದಾಗಿ ತಿಳಿಸಿದರು.
ಹಾಗೆಯೆ ರೇಷ್ಮೆ ನೂಲು ಖರೀದಿಗೆ ನೀಡುವ ಪ್ರೋತ್ಸಾಹ ಧನ ಬಾಕಿ ಇರುವ ಬಗ್ಗೆ ವರದಿ ಸಂಬಂಧಿಸಿದ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು, ರೀಲರುಗಳಿಗೆ ನೀಡುವ ಸಾಲ ಸೌಲಭ್ಯ, ಪ್ರೋತ್ಸಾನ ಧನದ ಅನುದಾನವನ್ನು ಬೇರೆ ತಾಲೂಕುಗಳಿಗಿಂತಲೂ ಇಲ್ಲಿಗೆ ಹೆಚ್ಚು ಪ್ರಮಾಣದಲ್ಲಿ ನೀಡುವುದಾಗಿ ಹೇಳಿದರು.
ಈ ವೇಳೆ ರೀಲರುಗಳು ಹೈಟೆಕ್ ಮಾರುಕಟ್ಟೆಯನ್ನು ನಗರದಲ್ಲಿ ಈಗಿರುವ ಮಾರುಕಟ್ಟೆಯ ಜಾಗದಲ್ಲೆ ನಿರ್ಮಿಸಿ, ನಗರದಿಂದ ಹೊರಗೆ ಮಾರುಕಟ್ಟೆ ನಿರ್ಮಿಸಿದರೆ ರೈತರು ಬರುವುದಿಲ್ಲ, ರೀಲರುಗಳಿಗೂ ತೊಂದರೆ ಅಗಲಿದೆ ಎಂದರು.
ಈಗಾಗಲೆ ಮಾರುಕಟ್ಟೆಗೆ ಬರುವ ರೇಷ್ಮೆಗೂಡಿನ ಪ್ರಮಾಣ ಸಾಕಷ್ಟು ಕುಸಿದಿದೆ. ಇನ್ನು ಹೊರಗಡೆ ಹೈಟೆಕ್ ಮಾರುಕಟ್ಟೆ ನಿರ್ಮಿಸಿದರೆ ಇನ್ನಷ್ಟು ಗೂಡಿನ ಆವಕ ಪ್ರಮಾಣ ಕುಸಿಯಲಿದೆ. ಹಾಗಾಗಿ ಈಗಿರುವ ಮಾರುಕಟ್ಟೆಯಲ್ಲಿಯೆ ಹೆಚ್ಚಿನ ಮೂಲ ಸೌಕರ್ಯಗಳನ್ನು ಕಲ್ಪಿಸಿ ರೈತರು ಹಾಗೂ ರೀಲರುಗಳಿಗೆ ಅನುಕೂಲ ಮಾಡಿಕೊಡಿ ಎಂದು ಬೇಡಿಕೆಯಿಟ್ಟರು.
ರೇಷ್ಮೆ ಇಲಾಖೆಯ ಹೆಚ್ಚುವರಿ ಆಯುಕ್ತ ಬಿ.ಅರ್.ನಾಗಭೂಷಣ್, ಜಿಲ್ಲಾ ಪಂಚಾಯಿತಿ ಡಿಡಿ ಭೋಜಣ್ಣ, ಮಾರುಕಟ್ಟೆಯ ಡಿಡಿ ಮಹದೇವಯ್ಯ, ತಿಮ್ಮರಾಜು, ಚಂದ್ರಪ್ಪ, ರಾಂಕುಮಾರ್, ರೀಲರುಗಳ ಸಂಘದ ಅನ್ವರ್, ಅನ್ಸರ್‌ಖಾನ್, ಆನಂದ್ ಹಾಜರಿದ್ದರು.