
Sidlaghatta : ಶಿಡ್ಲಘಟ್ಟದ ಮುತ್ತೂರು ಬೀದಿಯಲ್ಲಿ ಇರುವ ಕರಗದಮ್ಮದೇವಿಯ ಕರಗ ಮಹೋತ್ಸವವು ಶನಿವಾರ ರಾತ್ರಿ ಶ್ರದ್ಧಾ ಮತ್ತು ಭಕ್ತಿಯಿಂದ ವಿಜೃಂಭಣೆಯಿಂದ ನಡೆಯಿತು.
ಕರಗ ಉತ್ಸವ ಅನ್ನೋದು ಶಕ್ತಿ ದೇವಿಯ ವಿಶೇಷ ಆಚರಣೆಯಾಗಿದ್ದು, ಈ ದೇವಿಯನ್ನು ಕರಗದಮ್ಮ ಎಂದು ಕರೆಯಲಾಗುತ್ತದೆ. ಈ ಪಾರಂಪರಿಕ ಆಚರಣೆ ನಮ್ಮ ಕರ್ನಾಟಕ ಮತ್ತು ತಮಿಳುನಾಡು ಭಾಗದಲ್ಲಿ ಮಾತ್ರ ನಡೆಯುತ್ತದೆ.
ಈ ಆಚರಣೆಯು 14ನೇ ಶತಮಾನದಲ್ಲಿ ತಮಿಳುನಾಡಿನಿಂದ ಬಂದ ರಣಭೈರೇಗೌಡರ ಮೂಲಕ ಆರಂಭವಾಯಿತು ಎಂದು ನಂಬಲಾಗುತ್ತದೆ. ಬೆಂಗಳೂರು ಕಟ್ಟಿದ ಕೆಂಪೇಗೌಡ ಅವರ ವಂಶದವರೇ ಈ ಆಚರಣೆಯನ್ನು ಹರಡಿದರು. ಇವರು ಆಡಿದ ಪ್ರದೇಶಗಳಾದ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಕೋಲಾರ, ಯಲಹಂಕ, ಮಾಗಡಿ ಮೊದಲಾದೆಡೆ ಈ ಕರಗ ಉತ್ಸವ ಇಂದಿಗೂ ನಡೆಯುತ್ತಿದೆ.
ಕರಗವನ್ನು ಆಚರಿಸುವಾಗ ಮಣ್ಣಿನ ಮಡಿಕೆಗೆ ನೀರು ತುಂಬಿ, ಅದನ್ನು ಅರಿಶಿನ, ಕುಂಕುಮ ಮತ್ತು ಹೂಗಳಿಂದ ಅಲಂಕರಿಸುತ್ತಾರೆ. ಮಲ್ಲಿಗೆಯ ಹೂಗಳಿಂದ ಗೋಪುರದಂತೆ ಹಾಕಿದ ಹಾರಗಳನ್ನು ತಲೆಯ ಮೇಲೆ ಇಡುತ್ತಾರೆ. ಇದುವೇ ಕರಗ.
ಈ ವರ್ಷ ವೆಂಕಟೇಶ್ ಅವರು ಕರಗ ಹೊತ್ತಿದ್ದರು. ವೀರಕುಮಾರರು ಭಕ್ತಿಯಿಂದ ಅಲಗು ಸೇವೆ ಸಲ್ಲಿಸಿದರು. ಹಲಗೆ, ತಮಟೆ ವಾದ್ಯಗಳ ಸಂಗತಿಯಲ್ಲಿ ಕರಗ ದೇವಾಲಯದ ಸುತ್ತಲೂ ಹಾಗೂ ಊರಿನ ಮುಖ್ಯ ಬೀದಿಗಳಲ್ಲಿ ಸಂಚರಿಸಿತು.
ಮನೆ ಮನೆಗಳಲ್ಲಿ ಭಕ್ತರು ರಂಗೋಲಿ ಹಾಕಿ, ಆರತಿ ಬೆಳಗಿ, ಹೂಗಳನ್ನು ಅರ್ಪಿಸಿ ದೇವಿಗೆ ನಮಿಸಿದರು. ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಅನ್ನದಾನ ಆಯೋಜಿಸಲಾಗಿತ್ತು. ಊರಿನ ಎಲ್ಲಾ ರಸ್ತೆಗಳೂ ವಿದ್ಯುತ್ ದೀಪಗಳಿಂದ ಅಲಂಕರಿಸಲ್ಪಟ್ಟಿದ್ದವು.
ಈ ಕರಗ ಉತ್ಸವವು ಶಕ್ತಿ ದೇವಿಗೆ ಸಲ್ಲಿಸಲಾದ ನಂಬಿಕೆಯ ಸಂಕೇತವಾಗಿ, ಎಲ್ಲರ ಮನದಲ್ಲಿ ಭಕ್ತಿಯನ್ನು ತುಂಬಿದ ವಿಶೇಷ ರಾತ್ರಿ ಆಗಿತ್ತು.