Sidlaghatta : ಮಕ್ಕಳು ತಮ್ಮ ಬದುಕನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಶಾಲಾ ಕಾಲೇಜು ಶಿಕ್ಷಣ ಎಷ್ಟು ಮುಖ್ಯವೋ ಶಾಲಾ ಪೂರ್ವ ಶಿಕ್ಷಣವೂ ಅಷ್ಟೇ ಮುಖ್ಯ ಎಂದು ಶಿಶು ಅಭಿವೃದ್ದಿ ಯೋಜನಾಧಿಕಾರಿ ನವತಾಜ್ ಅಭಿಪ್ರಾಯಪಟ್ಟರು.
ನಗರದಲ್ಲಿನ ಸ್ತ್ರೀಶಕ್ತಿ ಭವನದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಚೈಲ್ಡ್ ರೈಟ್ಸ್ ಟ್ರಸ್ಟ್‌ನ ಆಶ್ರಯದಲ್ಲಿ ಅಂಗನವಾಡಿ ಕಾರ್ಯಕರ್ತರಿಗೆ ಮಂಗಳವಾರ ಹಮ್ಮಿಕೊಂಡಿದ್ದ ಶಾಲಾ ಪೂರ್ವ ಶಿಕ್ಷಣದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಮಕ್ಕಳು ಶಾಲೆಗೆ ದಾಖಲಾಗುವ ಮುನ್ನ ಮನೆಯೆ ಪಾಠ ಶಾಲೆ ಆಗಿರುತ್ತದೆ. ಅಲ್ಲಿ ತಂದೆ ತಾಯಿ ಅಣ್ಣ ಅಕ್ಕ ತಾತ ಅಜ್ಜಿ ಇನ್ನಿತರೆ ಎಲ್ಲರಿಂದಲೂ ಮಕ್ಕಳನ್ನು ಕಲಿಯಲು ಆರಂಭಿಸುತ್ತದೆ. ನಂತರ ಅಂಗನವಾಡಿ ಕೇಂದ್ರ ಅಥವಾ ಪ್ರೀ ನರ್ಸರಿಯಲ್ಲಿ ಕಲಿಕೆ ಆರಂಭವಾಗುತ್ತದೆ.
ಆದ್ದರಿಂದ ಶಾಲಾ ಪೂರ್ವದಲ್ಲಿ ಸಿಗುವ ಶಿಕ್ಷಣ ಆ ಮಗುವಿನ ಬದುಕಿನಲ್ಲಿ ಅತ್ಯಂತ ಮಹತ್ವದ್ದು ಮತ್ತು ಅದು ಮುಂದಿನ ಶಿಕ್ಷಣ ಕಲಿಕೆಗೆ ಅಡಿಪಾಯದಂತೆ ನೆರವಾಗಲಿದೆ ಎಂದು ಹೇಳಿದರು.
ಈ ನಿಟ್ಟಿನಲ್ಲಿ ಆಯ್ದ ಕೆಲ ಅಂಗನವಾಡಿ ಕಾರ್ಯಕರ್ತೆಯರಿಗೆ ಶಾಲಾ ಪೂರ್ವ ಶಿಕ್ಷಣದ ತರಬೇತಿಯನ್ನು ನೀಡಲಾಗುತ್ತಿದ್ದು ತರಬೇತಿಯನ್ನು ಸದುಪಯೋಗಪಡಿಸಿಕೊಳ್ಳಿ, ಶಾಲಾ ಪೂರ್ವ ಕಲಿಕೆಯ ಮಕ್ಕಳಿಗೆ ಉತ್ತಮ ಬುನಾದಿ ಹಾಕಿ ಎಂದು ಮನವಿ ಮಾಡಿದರು.
ಚೈಲ್ಡ್ ರೈಟ್ಸ್ ಟ್ರಸ್ಟ್‌ನ ಜಯರಾಂ ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಿಗೆ ಶಾಲಾಪೂರ್ವ ಶಿಕ್ಷಣದ ಅಗತ್ಯ ಗುರಿ ಮತ್ತು ಉದ್ದೇಶದ ಮಹತ್ವವನ್ನು ವಿವರಿಸಿದರು. ಶಾಲಾ ಪೂರ್ವ ಶಿಕ್ಷಣವು ಮನೆಯಲ್ಲಿ, ಅಂಗನವಾಡಿ ಹಾಗೂ ಪ್ರೀ ನರ್ಸರಿ ಶಾಲೆಯಲ್ಲೂ ನೀಡಬೇಕಿದ್ದು ಅದು ಮಗುವಿನ ಹಕ್ಕು ಕೂಡ ಆಗಿದೆ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ತ್ಯಾಗರಾಜ್ ಮಾತನಾಡಿ, ಶಾಲಾ ಪೂರ್ವ ಶಿಕ್ಷಣವು ಮಕ್ಕಳಿಗೆ ತಾಯಿಯ ಗರ್ಭದಿಂದಲೆ ಸಿಗಲಾರಂಭಿಸುತ್ತದೆ ಮತ್ತು ಅದು ಮನುಷ್ಯ ಸಾಯುವತನಕ ನೆರವಿಗೆ ಬರಲಿದೆ, ಜತೆಗಿರಲಿದೆ ಎಂದು ಶಾಲಾ ಪೂರ್ವ ಶಿಕ್ಷಣದ ಮಹತ್ವ ಕುರಿತು ತಿಳಿಸಿದರು.
ಇದು ಡಿಜಿಟಲ್ ಕಾಲದ ಯುಗವಾಗಿದ್ದು ಮಕ್ಕಳ ಕಲಿಕಾ ಜ್ಞಾನದ ಮಟ್ಟ ಮತ್ತು ದಿಕ್ಕು ಬದಲಾಗಿದೆ. ಹಾಗಾಗಿ ಶಿಕ್ಷಕರು ಕೂಡ ಕಲಿಸುವ ಪ್ರಕ್ರಿಯೆಯಲ್ಲಿ ಮಕ್ಕಳ ಹಂತದಲ್ಲಿ, ಮಕ್ಕಳ ಮನಸ್ಥಿತಿಯಲ್ಲೆ ಆಲೋಚಿಸಬೇಕಾಗಿದೆ ಎಂದು ಹೇಳಿ ಇಲಾಖೆಯಿಂದ ಕೊಟ್ಟ ದೀಕ್ಷಾ ಪೋರ್ಟಲ್ ಕೋರ್ಸ್ ಸಹ ಲಭ್ಯವಿರುತ್ತದೆ ಎಂದರು.
ಚೈಲ್ಡ್ ರೈಟ್ಸ್ ಟ್ರಸ್ಟ್ ನ ರಾಮಕೃಷ್ಣಪ್ಪ, ರವೀಂದ್ರನಾಥ್, ಗಾಯಿತ್ರಿ, ನಿರ್ಮಲ, ಕಾಂತರಾಜು ಸೇರಿದಂತೆ ತರಬೇತಿಯಲ್ಲಿ ಭಾಗವಹಿಸಿದ್ದ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.