Hittalahalli, Sidlaghatta : ಬೇಸಿಗೆಯ ಬಿಸಿಲು ಮನುಷ್ಯರನ್ನಷೇ ಅಲ್ಲ, ಪಕ್ಷಿಗಳು ಹಾಗೂ ವನ್ಯಜೀವಿಗಳಿಗೂ ತಟ್ಟಿದೆ. ಗಿಡಮರಗಳೆಲ್ಲಾ ಒಣಗಿರುವ ತಾಲ್ಲೂಕಿನ ಹಿತ್ತಲಹಳ್ಳಿಯ ಅರಣ್ಯಪ್ರದೇಶದಲ್ಲಿ ಪಕ್ಷಿಗಳು ಮತ್ತು ಪ್ರಾಣಿಗಳಿಗೆ ನೀರನ್ನಿಡುವ ಮೂಲಕ ಗ್ರಾಮದ ಕೆಲ ಯುವಕರು ಮಾದರಿಯಾಗಿದ್ದಾರೆ.
ಈ ವರ್ಷದ ಬೇಸಿಗೆ ಅತ್ಯಧಿಕವಾಗಿದ್ದು 38 ಡಿಗ್ರಿ ಯಿಂದ 40 ಡಿಗ್ರಿ ವರೆಗೂ ಬಿಸಿಲು ಕಂಡು ಬರುತ್ತಿದೆ. ವಾತಾವರಣದಲ್ಲಿ ಸಾಕಷ್ಟು ಬದಲಾವಣೆ ಕಾಣಿಸುತ್ತಿದೆ, ಹಾಗಾಗಿ ಕೆರೆಗಳಲ್ಲಿ ನೀರಿಲ್ಲ, ಕಾಡಿನಲ್ಲಿ ಇದ್ದಂತಹ ಕಟ್ಟೆಗಳಲ್ಲಿಯೂ ನೀರು ಇಲ್ಲದೆ ಮೂಕ ಪ್ರಾಣಿಗಳ ರೋಧನೆ ಹೇಳ ತೀರದಾಗಿದೆ. ಇದೆಲ್ಲವನ್ನೂ ಮನಗಂಡ ಹಿತ್ತಲಹಳ್ಳಿ ಗ್ರಾಮದ ಯುವಕರು ಕಾಡಿನಲ್ಲಿ ಪ್ರಾಣಿ, ಪಕ್ಷಿಗಳಿಗೆ ನೀರು ಒದಗಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಹಿತ್ತಲಹಳ್ಳಿ ಕಾಡಿನ ಒಳಭಾಗದಲ್ಲಿ ಸುಮಾರು 11 ತೊಟ್ಟಿ ನಿರ್ಮಾಣ ಮಾಡಿ ಅದಕ್ಕೆ ನೀರು ಬಿಡುವ ಮೂಲಕ ಪ್ರಾಣಿ ಮತ್ತು ಪಕ್ಷಿಗಳ ದಾಹ ತಣಿಸುವ ಕೆಲಸ ಮಾಡುತ್ತಿದ್ದಾರೆ.
“ಹಿತ್ತಲಹಳ್ಳಿ ಕಾಡಿನಲ್ಲಿ ಹನ್ನೊಂದು ತೊಟ್ಟಿಗಳನ್ನು ಮತ್ತು ಗ್ರಾಮ ಹಾಗೂ ಸುತ್ತಮುತ್ತ ಹತ್ತು ತೊಟ್ಟಿಗಳನ್ನು ಸುಮಾರು 15 ವರ್ಷಗಳ ಹಿಂದೆಯೇ ಇರಿಸಿದ್ದೆವು. ಇತ್ತೀಚೆಗೆ ನಿಧನರಾದ ಬೆಳ್ಳೂಟಿ ಸಂತೋಷ್ ಇದರ ಹಿಂದಿನ ಪ್ರೇರಣೆ ಮತ್ತು ಕಾರಣ. ಪ್ರತಿ ವರ್ಷ ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾದಾಗ ಅವರು ಇವುಗಳಲ್ಲಿ ನೀರನ್ನು ಹಾಕಿಸುತ್ತಿದ್ದರು. ಬೆಳ್ಳೂಟಿ ಕೆರಯ ನಡುವಿನ ನಡುಗಡ್ಡೆಗಳು, ಗ್ರಾಮದ ಸುತ್ತ ಹಾಗೂ ಹಿತ್ತಲಹಳ್ಳಿ ಸುತ್ತಮುತ್ತ ಸಾವಿರಾರು ಗಿಡಗಳನ್ನು ಅವರು ಹಾಕಿಸಿದ್ದರು. ಬೆಳ್ಳೂಟಿ ಸಂತೋಷ್ ಅವರು ಜನವರಿಯಿಂದ ಇತ್ತೀಚೆಗೆ ನಿಧನರಾಗುವವರೆಗೂ ಒಂದೂವರೆ ಲಕ್ಷ ರೂಗಳನ್ನು ಟ್ಯಾಂಕರ್ ನೀರಿಗಾಗಿಯೇ ಖರ್ಚು ಮಾಡಿದ್ದರು” ಎಂದು ಹಿತ್ತಲಹಳ್ಳಿ ಮುನಿರಾಜು ತಿಳಿಸಿದರು.
ಹಿತ್ತಲಹಳ್ಳಿ ಕಾಡಿನಲ್ಲಿರುವ ಜಿಂಕೆಗಳು, ಕೃಷ್ಣಮೃಗ, ಕಾಡು ಮೊಲ, ಪಕ್ಷಿಗಳು, ನವಿಲುಗಳಿಗೆ ನೀರಿನ ದಾಹ ತೀರಿಸಲು ಈ ತೊಟ್ಟಿ ಬಳಕೆ ಮಾಡಲಾಗುತ್ತಿದೆ.
“ಟ್ಯಾಂಕರ್ ಹೊಂದಿರುವ ಆನೂರಿನ ವಾಸಿ ಅರಿಶಿನಕುಂಟೆ ಕೃಷ್ಣಪ್ಪ ಅವರು, ಬೆಳ್ಳೂಟಿ ಸಂತೋಷ್ ಅವರಷ್ಟು ಸೇವೆ ಮಾಡಲಾಗದಿದ್ದರೂ, ಅವರ ಪ್ರೇರಣೆಯಿಂದ ಪಶು, ಪಕ್ಷಿಗಳಿಗೆ ಉಚಿತವಾಗಿ ನೀರು ಹಾಕಿಕೊಡುವುದಾಗಿ ಒಪ್ಪಿಕೊಂಡಿದ್ದು, ನೀರು ಹಾಕುತ್ತಿದ್ದಾರೆ” ಎಂದು ಮುನಿರಾಜು ಹೇಳಿದರು.