E Timmasandra, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಈ.ತಿಮ್ಮಸಂದ್ರ ಗ್ರಾಮದಲ್ಲಿ ಸಾಮೂಹಿಕ ಆಸ್ತಿಗಳ ಸಾಪ್ತಾಹ ಮತ್ತು ವಿಶ್ವ ಮಣ್ಣು ದಿನಾಚರಣೆಯ ಕಾರ್ಯಕ್ರಮದಲ್ಲಿ ನೈಸರ್ಗಿಕ ಸಂಪತ್ತುಗಳ ಉಳಿವಿನ ಕುರಿತು ಚರ್ಚೆ ನಡೆಯಿತು. ಎಫ್.ಇ.ಎಸ್ ಸಂಸ್ಥೆಯ ಕಾರ್ಯಕ್ರಮ ವ್ಯವಸ್ಥಾಪಕಿ ನಿಖತ್ ಪರ್ವೀನ್ ಮಾತನಾಡಿ, “ಗ್ರಾಮೀಣ ಭಾಗದ ರೈತರು ಹಣದಾಸೆಯಿಂದ ರಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕಗಳನ್ನು ಅತಿಯಾಗಿ ಬಳಸುತ್ತಿರುವುದು ನೈಸರ್ಗಿಕ ಸಂಪತ್ತುಗಳನ್ನು ಹಾನಿಗೊಳಿಸುತ್ತಿದೆ. ಈ ಕ್ರಮದಿಂದ ಭೂಮಿ, ನೀರು ಮತ್ತು ಗಾಳಿ ಕಲುಷಿತಗೊಳ್ಳುತ್ತಿದ್ದು, ಮುಂದಿನ ಪೀಳಿಗೆಗಳಿಗೆ ಅಪಾಯ ಉಂಟಾಗಿದೆ” ಎಂದು ಹೇಳಿದರು.
ನಾವು ತಿನ್ನುವ ಆಹಾರ ಮಣ್ಣಿನಲ್ಲಿ ಬೆಳೆಯುತ್ತಿದ್ದು, ರಸಾಯನಿಕ ಗೊಬ್ಬರ ಬಳಕೆಯಿಂದ ಆ ಆಹಾರ ಕಲುಷಿತವಾಗುತ್ತಿದ್ದು, ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದನ್ನು ತಡೆಯಲು ಸಾವಯವ ಗೊಬ್ಬರಗಳಾದ ಪಂಚಗವ್ಯ ಮತ್ತು ಜೀವಾಮೃತಗಳನ್ನು ಬಳಸಿ ಮಣ್ಣಿನ ಫಲವತ್ತತೆಯನ್ನು ಉಳಿಸಲು ಕ್ರಮ ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು. ಬಯಲುಸೀಮೆಯ ಬಾರಡಾಗುತ್ತಿರುವ ಪ್ರದೇಶದಲ್ಲಿ ಮಣ್ಣು ಮತ್ತು ಜಲಸಂಪತ್ತು ರಕ್ಷಣೆ ಅನಿವಾರ್ಯ ಎಂದು ಅವರು ಒತ್ತಿಹೇಳಿದರು.
ವಿಜ್ಞಾನಿ ಡಾ. ಸೆಮೀವುಲ್ಲಾ ಅವರು ಮಣ್ಣಿನ ಮಹತ್ವ ಮತ್ತು ಅದರ ಜೀವನಾಂಶಗಳನ್ನು ಅರಿಯುವ ಅಗತ್ಯವನ್ನು ಉಲ್ಲೇಖಿಸಿ, “ಭೂಮಿಯ ಮೇಲೆ ಜೀವನದ ಮೂಲ ಮಣ್ಣೇ ಆಗಿದೆ. ಮಣ್ಣಿನ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ಈ ರೀತಿಯ ಕಾರ್ಯಕ್ರಮಗಳು ಪ್ರಶಂಸನೀಯ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಈ.ತಿಮ್ಮಸಂದ್ರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ತನ್ವೀರ್ ಅಹಮದ್, ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ಬೈರಾರೆಡ್ಡಿ, ಎಫ್.ಇ.ಎಸ್ ಮತ್ತು ಸಿ.ಎಸ್.ಎ ಸಂಸ್ಥೆಗಳ ಸಿಬ್ಬಂದಿ, ಪ್ರಗತಿಪರ ರೈತರು, ಗ್ರಾಮ ಮುಖಂಡರು, ಹಾಗೂ ಸ್ಥಳೀಯ ಸಮುದಾಯದ ಸದಸ್ಯರು ಭಾಗವಹಿಸಿದರು. ರೈತರಿಗೆ ಸಾವಯವ ಮತ್ತು ಪ್ರಕೃತಿಪೂರಕ ಕೃಷಿಯ ತರಬೇತಿಗಳನ್ನು ನೀಡಲು ವಿಸ್ತೃತ ಕಾರ್ಯಕ್ರಮಗಳ ಮಾದರಿಯನ್ನು ಪ್ರಸ್ತಾಪಿಸಲಾಯಿತು.