
Sidlaghatta : ಮಹಿಳೆಯು ಎಲ್ಲ ಕ್ಷೇತ್ರಗಳಲ್ಲಿ ಪುರುಷರ ಸಮಾನವಾಗಿ ಧ್ವನಿ ಎತ್ತಿ, ಸರ್ವಾಂಗೀಣ ಅಭಿವೃದ್ಧಿ ಸಾಧಿಸಬೇಕಾದರೆ ಕಾನೂನಿನ ಅರಿವು ಬಹಳ ಮುಖ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಹೇಳಿದರು.
ನಗರದ ಸ್ತ್ರೀಶಕ್ತಿ ಭವನದಲ್ಲಿ ಗುರುವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ “ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ” ಮತ್ತು “ವಿಶ್ವ ಗ್ರಾಹಕ ಹಕ್ಕುಗಳ ದಿನಾಚರಣೆ” ಕಾರ್ಯಕ್ರಮದ ಅಂಗವಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿಂದಿನ ದಿನಗಳಲ್ಲಿ ಮಹಿಳೆಯರ ರಕ್ಷಣೆಯ ದೃಷ್ಟಿಯಿಂದ ಮತ್ತು ಸಾಮಾಜಿಕ ಮೂಢನಂಬಿಕೆಗಳ ಕಾರಣದಿಂದ ಅವರಿಗೆ ಪುರುಷರಿಗೆ ಸರಿಸಮಾನವಾದ ಹಕ್ಕುಗಳು ಹಾಗೂ ಅಧಿಕಾರ ದೊರಕುತ್ತಿರಲಿಲ್ಲ. ಆದರೆ, ಇಂದಿನ ಆಧುನಿಕ ಜಗತ್ತಿನಲ್ಲಿ ಮಹಿಳೆಯು ಪ್ರತಿಯೊಂದು ಕ್ಷೇತ್ರದಲ್ಲೂ ಮುಕ್ತವಾಗಿ ತೊಡಗಿಸಿಕೊಳ್ಳಲು ಸಾಕಷ್ಟು ಅವಕಾಶಗಳಿವೆ. ಮಹಿಳೆಯರು ತಮ್ಮ ಹಕ್ಕುಗಳ ಅರಿವು ಪಡೆಯಬೇಕು, ಕಾನೂನಿನ ಪ್ರಕಾರ ಪ್ರಾಮಾಣಿಕವಾಗಿ ಹೋರಾಟ ನಡೆಸಬೇಕು ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿದ್ಯಾ ಎ. ವಸ್ತ್ರದ್ ಮಾತನಾಡಿ, “ಕವಿ ಜಿ.ಎಸ್. ಶಿವರುದ್ರಪ್ಪ ಅವರ ‘ಮನೆಮನೆಯಲಿ ದೀಪ ಮುಡಿಸಿ, ಹೊತ್ತು ಹೊತ್ತಿಗೆ ಅನ್ನ ಉಣಿಸಿ, ತಂದೆ ಮಗುವ ತಬ್ಬಿದಾಕೆ, ನಿನಗೆ ಬೇರೆ ಹೆಸರು ಬೇಕೆ? ಸ್ತ್ರೀ ಎಂದರೆ ಅಷ್ಟೇ ಸಾಕೆ?’ ಎಂಬ ಸಾಲುಗಳು ಮಹಿಳೆಯ ಪ್ರಾಮುಖ್ಯತೆಯನ್ನು ಸ್ಪಷ್ಟಪಡಿಸುತ್ತವೆ. ಶೋಷಣೆಯನ್ನು ಹಿಂದಿಕ್ಕಿ, ‘ನಾನು ಅಬಲೆಯಲ್ಲ, ಸಬಲೆಯಾಗಿದ್ದೇನೆ’ ಎಂಬ ಆತ್ಮವಿಶ್ವಾಸದಿಂದ ಮಹಿಳೆಯರು ಸದೃಢ ಹೆಜ್ಜೆ ಹಾಕುತ್ತಿದ್ದಾರೆ” ಎಂದು ಹೇಳಿದರು.
ಈ ವೇಳೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಪ್ರಧಾನ ಸಿವಿಲ್ ನ್ಯಾಯಾಧೀಶೆ ಪೂಜಾ ಜೆ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಎ.ನಾರಾಯಣಸ್ವಾಮಿ, ಕಾರ್ಯದರ್ಶಿ ಸಿ.ಜಿ. ಭಾಸ್ಕರ್, ವಕೀಲೆ ವೀಣಾ ಹಾಗೂ ಅನೇಕ ಮಹಿಳಾ ಪ್ರತಿನಿಧಿಗಳು ಉಪಸ್ಥಿತರಿದ್ದರು.