Sidlaghatta : ಭಾರತ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ 2023 ರ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯವನ್ನು ಅಪರ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಚುನಾವಣಾಧಿಕಾರಿಗಳ ಆದೇಶದ ಮೇರೆಗೆ ನಡೆಸಿದ್ದು, ಕಳೆದ ನವೆಂಬರ್ 9 ರಿಂದ ಡಿಸೆಂಬರ್ 8 ರವರೆಗೂ ಸಮರೋಪಾದಿಯಲ್ಲಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದೆವು. ಇದೀಗ ಕರಡು ಪ್ರತಿ ಬಿಡುಗಡೆ ಮಾಡಲಾಗಿದೆ ಎಂದು ತಹಶೀಲ್ದಾರ್ ಬಿ.ಎಸ್.ರಾಜೀವ್ ತಿಳಿಸಿದರು.
ಶಿಡ್ಲಘಟ್ಟ ನಗರದ ತಾಲ್ಲೂಕು ಕಚೇರಿಯಲ್ಲಿ ವಿವಿಧ ರಾಜಕೀಯ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಹೊಸದಾಗಿ 5747 ಮತದಾರರು ಸೇರ್ಪಡೆಯಾಗಿದ್ದರೆ, 1177 ಮತದಾರರ ಕೈಬಿಡುವಿಕೆ ನಡೆದಿದೆ. 18-19 ವಯಸ್ಸಿನ ಯುವ ಮತದಾರರು 2756 ಮಂದಿ ಸೇರ್ಪಡೆಯಾಗಿದ್ದಾರೆ. ಒಟ್ಟಾರೆ 1,98,947 ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.
ಆಧಾರ್ ಮತ್ತು ಮತದಾರ ಚೀಟಿ ಲಿಂಕ್ ಮಾಡುವಲ್ಲಿ ನಗರ ಪ್ರದೇಶ ಶೇ 75 ರಷ್ಟಾಗಿದ್ದರೆ, ತಾಲ್ಲೂಕಿನಲ್ಲಿ ಶೇ 94 ರಷ್ಟು ಆಗಿದೆ. ಗುರುವಾರ ಕರಡು ಪ್ರತಿಯನ್ನು ಬಿಡುಗಡೆಗೊಳಿಸಲಾಗಿದೆ. ಮತದಾರರು ಸರಿ ತಪ್ಪು ಮತ್ತು ಸೇರ್ಪಡೆ ಪರಿಶೀಲನೆ ಮಾಡಲು ತಿಳಿಸಿದ್ದು, ಜನವರಿ 13ರಂದು ಮತದಾರರ ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ. ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿ ಅನ್ವಯ ಈಗಾಗಲೇ ಮತಗಟ್ಟೆ ಹಂತದ ಬಿಎಲ್ಓ ಅಧಿಕಾರಿಗಳನ್ನು ನೇಮಿಸಲಾಗಿದೆ. ಮತದಾರರು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ದಯವಿಟ್ಟು ತಮ್ಮ ಮತಗಟ್ಟೆಗಳಿಗೆ ಹೋಗಿ ಪರಿಶಿಲಿಸಿ. ಭಾವಚಿತ್ರ, ಹೆಸರು, ಇನಿಶಿಯಲ್ಲು ಮುಂತಾದ ಲೋಪದೋಷಗಳೇನಾದರೂ ಕಂಡುಬಂದಲ್ಲಿ ನಮ್ಮ ಗಮನಕ್ಕೆ ತನ್ನಿ, ಸರಿಪಡಿಸುತ್ತೇವೆ. 18 ವರ್ಷ ತುಂಬಿದವರು, ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರು, ತಿದ್ದುಪಡಿ ಮತ್ತು ಹೆಸರು ತೆಗೆಯುವ ಬಗ್ಗೆ ಅರ್ಜಿ ನೀಡಬಹುದು ಎಂದು ಹೇಳಿದರು.
ನಗರಸಭೆ ಪೌರಾಯುಕ್ತ ಅರ್.ಶ್ರೀಕಾಂತ್, ತಾಲ್ಲೂಕು ಪಂಚಾಯಿತಿ ಇಓ ಮುನಿರಾಜು, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ವಿವಿಧ ರಾಜಕೀಯ ಪಕ್ಷದ ಮುಖಂಡರಾದ ಡಿ.ವಿ.ವೆಂಕಟೇಶ್, ಮುಗಲಡಪಿ ನಂಜಪ್ಪ, ಕನಕಪ್ರಸಾದ್, ರಮೇಶ್, ಕೃಷ್ಣಮೂರ್ತಿ, ರಾಜಕುಮಾರ್, ರಾಘವೇಂದ್ರ, ಚಲಪತಿ ಹಾಜರಿದ್ದರು.