ಶಿಡ್ಲಘಟ್ಟ ತಾಲ್ಲೂಕಿನ ವೀರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆಯನ್ನು ಆಯೋಜಿಸಲಾಗಿತ್ತು.
ಚಾಲನೆ ನೀಡಿದ ಮುಖ್ಯ ಶಿಕ್ಷಕ ಎಂ.ಸೀನಪ್ಪ, “ಓದಿನ ಜೊತೆಗೆ ಮಕ್ಕಳಿಗೆ ವ್ಯವಹಾರಿಕ ಜ್ಞಾನವನ್ನು ಬೆಳೆಸುವಲ್ಲಿ ಮಕ್ಕಳ ಸಂತೆ ಪ್ರಮುಖ ಪಾತ್ರ ವಹಿಸುತ್ತದೆ. ಜೀವನಾನುಭವ ಮತ್ತು ವ್ಯಾಪಾರದ ತತ್ವಗಳನ್ನು ಪ್ರಾಯೋಗಿಕವಾಗಿ ಕಲಿಸುವ ಉದ್ದೇಶದಿಂದ ಮಕ್ಕಳ ಸಂತೆಯನ್ನು ಆಯೋಜಿಸಲಾಗಿದೆ. ಈ ಮೂಲಕ ಪೋಷಕರ ಶ್ರಮ ಮತ್ತು ದುಡಿಮೆಯ ಅರಿವು ಮಕ್ಕಳಿಗೆ ದೊರೆಯುತ್ತದೆ” ಎಂದು ಹೇಳಿದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಭೂಮಿಕೇಶವ ಮಾತನಾಡಿ, “ಮಕ್ಕಳಿಗೆ ವ್ಯವಹಾರ ಜ್ಞಾನ ಬೆಳೆಯುವುದು ಬಹುಮುಖ್ಯವಾಗಿದೆ. ಅಂಗಡಿಗೆ ಕಳುಹಿಸಿದಾಗ ಅಗತ್ಯ ವಸ್ತುಗಳನ್ನು ಕೊಳ್ಳುವ ಸಾಮರ್ಥ್ಯವನ್ನು ಮಕ್ಕಳು ಹೆಚ್ಚಿಸಿಕೊಳ್ಳಬೇಕು. ಇಂತಹ ಮಕ್ಕಳ ಸಂತೆಗಳು ಪ್ರಾಯೋಗಿಕ ತರಬೇತಿಗಾಗಿ ಉತ್ತಮ ವೇದಿಕೆಯಾಗಿವೆ” ಎಂದರು.
ಮಕ್ಕಳ ಸಂತೆಯಲ್ಲಿ ತರಕಾರಿ, ಸೊಪ್ಪು, ತೆಂಗಿನಕಾಯಿ, ತಿಂಡಿ-ತಿನಿಸು ಸೇರಿದಂತೆ ಹಲವಾರು ವಸ್ತುಗಳನ್ನು ಮಾರಾಟ ಮಾಡಲಾಯಿತು. ಮಕ್ಕಳ ನಡುವೆ ಪರಸ್ಪರ ಸ್ಪರ್ಧಾ ಮನೋಭಾವ ಪ್ರಚೋದಿತವಾಗಿದ್ದು, ತಮ್ಮ ಅಂಗಡಿಗಳ ಉತ್ಪನ್ನಗಳನ್ನು ಖರೀದಿಸಲು ಪೋಷಕರನ್ನು ಒತ್ತಾಯಿಸುವ ದೃಶ್ಯ ಗಮನಸೆಳೆಯಿತು.
ಈ ಸಂತೆಯಲ್ಲಿ ಶಿಕ್ಷಕರಾದ ಜಯಶ್ರೀದೇವಿ, ನಿರ್ಮಲ, ರಮಾದೇವಿ ಹಾಜರಿದ್ದು, ಮಕ್ಕಳ ಉತ್ಸಾಹವನ್ನು ಮೆಚ್ಚಿದರು.