Sidlaghatta : ಶಿಡ್ಲಘಟ್ಟ ನಗರದಲ್ಲಿ ಎರಡನೇ ಹಂತದ ಒಳ ಚರಂಡಿ ಯೋಜನೆ ಕಾರ್ಯಗತ ಮಾಡಲು ನಗರಾಭಿವೃದ್ದಿ ಸಚಿವ ಬೈರತಿ ಸುರೇಶ್ ಅವರು ಮೊದಲ ಕಂತು 30 ಕೋಟಿ ರೂ.ಬಿಡುಗಡೆ ಮಾಡಿದ್ದು ಉಳಿದ 42 ಕೋಟಿ ರೂ.ಗಳನ್ನು ನಂತರದಲ್ಲಿ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ಶಿಡ್ಲಘಟ್ಟ ನಗರ ಹೊರವಲಯದಲ್ಲಿರುವ ಒಳಚರಂಡಿಯ ತ್ಯಾಜ್ಯ ನೀರಿನ ಶುದ್ಧೀಕರಣ ಘಟಕಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.
ಶಿಡ್ಲಘಟ್ಟ ನಗರದಲ್ಲಿ ಒಳ ಚರಂಡಿ ನಿರ್ಮಾಣವಾಗಿದ್ದು ಬಾಕಿ ಉಳಿದ ಪ್ರದೇಶಗಳಲ್ಲಿ ಒಳ ಚರಂಡಿ ನಿರ್ಮಾಣಕ್ಕೆ 72 ಕೋಟಿ ರೂ.ಗಳ ಕ್ರಿಯಾ ಯೋಜನೆ ತಯಾರಿಸಿದ್ದು ಸಚಿವರು 30 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು ಬಾಕಿ 42 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಿದ್ದಾರೆ.
ಡಿಪಿಆರ್ ತಯಾರಾಗಿದ್ದು ಅನುಮೋದನೆ ಸಿಕ್ಕ ಕೂಡಲೆ ಕಾಮಗಾರಿ ಆರಂಭಿಸುವುದಾಗಿ ಹೇಳಿದ ಅವರು, ಮುಂದಿನ 30 ವರ್ಷಗಳ ನಂತರದ ಜನ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಒಳ ಚರಂಡಿ ಕಾಮಗಾರಿ ಹಾಗೂ ಮೂಲ ಸೌಕರ್ಯಗಳನ್ನು ಒದಗಿಸಿ ಅಭಿವೃದ್ದಿ ಕೈಗೊಳ್ಳಲಾಗುವುದು ಎಂದರು.
2004ರಲ್ಲಿ ನಿರ್ಮಾಣವಾದ ಒಳಚರಂಡಿಯ ತ್ಯಾಜ್ಯ ನೀರಿನ ಶುದ್ಧೀಕರಣ ಘಟಕವು ಶಿಥಿಲಗೊಂಡಿತ್ತಲ್ಲದೆ ಇನ್ನಷ್ಟು ಮೂಲ ಸೌಕರ್ಯಗಳನ್ನು ಕಲ್ಪಿಸಬೇಕಿತ್ತು. ಅದಕ್ಕಾಗಿ 35 ಲಕ್ಷ ರೂಗಳನ್ನು ಸರ್ಕಾರ ಬಿಡುಗಡೆ ಮಾಡಿದ್ದು ದುರಸ್ತಿ ಕಾರ್ಯವನ್ನು ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯು ಮಾಡುತ್ತಿದೆ.
ಶೇ 60 ರಷ್ಟು ಕಾಮಗಾರಿ ಮುಗಿದಿದ್ದು ಇನ್ನೆರಡು ವಾರದಲ್ಲಿ ದುರಸ್ತಿ ಕಾಮಗಾರಿ ಪೂರ್ಣಗೊಂಡು ನಗರಸಭೆಗೆ ಹಸ್ತಾಂತರ ಕಾರ್ಯವಾಗಲಿದೆ ಎಂದು ವಿವರಿಸಿದರು.
ಇಲ್ಲಿ ಇದೀಗ 2 ಸಿಬ್ಬಂದಿಯಷ್ಟೆ ಕಾರ್ಯನಿರ್ವಹಿಸುತ್ತಿದ್ದು 4 ಮಂದಿ ಸಿಬ್ಬಂದಿಯನ್ನು ನೇಮಿಸಿ ಎಂದು ಪೌರಾಯುಕ್ತರಿಗೆ ಸೂಚಿಸಿದರು. ಬೆಳಗ್ಗೆ ಮತ್ತು ರಾತ್ರಿ ಪಾಳಿಯಲ್ಲಿ ತಲಾ ಇಬ್ಬರನ್ನು ಕಾರ್ಯಕ್ಕೆ ನೇಮಿಸಿ, ಜತೆಗೆ ಈ ಕೆಲಸದಲ್ಲಿ ನೈಪುಣ್ಯತೆಯನ್ನು ಹೊಂದಿರುವವರನ್ನೆ ನಿಯೋಜಿಸಿ ಎಂದರು.
ನಗರಸಭೆ ಪೌರಾಯುಕ್ತ ಮಂಜುನಾಥ್, ಆರೋಗ್ಯ ನಿರೀಕ್ಷಕಿ ಮುಕ್ತಾಂಬ, ಮುರಳಿ, ಸುಧಾಕರ್, ಮುಖಂಡರಾದ ಬಂಕ್ ಮುನಿಯಪ್ಪ, ತಾದೂರು ರಘು, ನಗರಸಭೆ ಸದಸ್ಯರಾದ ನಂದುಕಿಷನ್, ರಾಘವೇಂದ್ರ ಹಾಜರಿದ್ದರು.