Sidlaghatta : ತಾವು ವಿದ್ಯಾವಂತರಲ್ಲದಿದ್ದರೂ ನಮ್ಮ ಮಕ್ಕಳು ವಿದ್ಯಾವಂತರಾಗಬೇಕು ಎಂಬ ಮಹದಾಸೆಯಿಂದ ಮಕ್ಕಳನ್ನು ಶಾಲೆಗೆ ಕಳುಹಿಸಿದರೆ ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುವ ಬದಲಿಗೆ ಮಕ್ಕಳ ಕೈಯಲ್ಲಿ ಪ್ರತಿನಿತ್ಯ ಶಾಲಾ ಆವರಣ ಸೇರಿದಂತೆ ಶೌಚಾಲಯಗಳನ್ನು ಸ್ವಚ್ಚಗೊಳಿಸುವ ಕೆಲಸ ಶಿಕ್ಷಕರು ಮಾಡುತ್ತಿದ್ದಾರೆ ಎಂದು ಮಕ್ಕಳ ಪೋಷಕರು ಆರೋಪಿಸಿ ಪ್ರತಿಭಟನೆ ನಡೆಸಲು ಯತ್ನಿಸಿದರು.
ನಗರದ ಕೋಟೆ ವೃತ್ತದಲ್ಲಿರುವ ಸರ್ಕಾರಿ ಮಾದರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಗೆ ಬುಧವಾರ ಮಕ್ಕಳ ಪೋಷಕರು ನುಗ್ಗಿ ಪ್ರತಿಭಟನೆ ನಡೆಸಿ ನಂತರ ಮುಖ್ಯೋಪಾಧ್ಯಾಯರೊಂದಿಗೆ ಮಾತಿನ ಚಕಮಕಿ ನಡೆಸಿದರು.
ನಗರದ ಕೋಟೆ ವೃತ್ತದ ಸರ್ಕಾರಿ ಶಾಲೆಯಲ್ಲಿ ಸುಮಾರು 170 ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು ಐವರು ಶಿಕ್ಷಕರಿದ್ದಾರೆ. ಬಹುತೇಕ ಮಕ್ಕಳ ಪೋಷಕರು ಕೂಲಿ ಕೆಲಸವನ್ನೇ ನಂಬಿ ಜೀವನ ನಡೆಸುತ್ತಿದ್ದು ನಮ್ಮಂತೆ ನಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಶಾಲೆಗೆ ಮಕ್ಕಳನ್ನು ಕಳುಹಿಸಿದರೆ ಶಾಲೆಯಲ್ಲಿ ಶಿಕ್ಷಣಕ್ಕಿಂತ ಹೆಚ್ಚು ಶಾಲೆಯ ಸ್ವಚ್ಚತೆ ಕಾರ್ಯಗಳಿಗೆ ಮಕ್ಕಳನ್ನು ಬಳಸುತ್ತಿದ್ದಾರೆ. ಜೊತೆಗೆ ತಾಲ್ಲೂಕಿನಾದ್ಯಂತ ಇರುವ ಎಲ್ಲಾ ಶಾಲೆಗಳಲ್ಲಿಯೂ ಬಿಸಿಯೂಟದ ಜೊತೆಗೆ ಹಾಲು ಹಾಗು ಮೊಟ್ಟೆ ವಿತರಿಸುತ್ತಿದ್ದರೆ ಇಲ್ಲಿ ಮೊಟ್ಟೆ ಹಾಗು ಹಾಲು ವಿತರಿಸುತ್ತಿಲ್ಲ ಎಂದು ಆರೋಪಿಸಿ ಕೆಲ ಕಾಲ ಪೋಷಕರು ಮುಖ್ಯೋಪಾಧ್ಯಾಯರ ವಿರುದ್ದ ಮಾತಿನ ಚಕಮಕಿ ನಡೆಸಿದರು.
ಈ ಬಗ್ಗೆ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಮೋಹನ್ ಮಾತನಾಡಿ, ವರ್ಷಕ್ಕೆ 80 ದಿನಗಳ ಕಾಲ ಮೊಟ್ಟೆ ಕೊಡಬೇಕು ಎಂಬ ನಿಯಮವಿದೆ ಹಾಗಾಗಿ ನಾವು ವರ್ಷದ ಯಾವುದಾದರೂ 80 ದಿನಗಳು ಮೊಟ್ಟೆ ವಿತರಿಸುತ್ತೇವೆ. ಇನ್ನು ಶಾಲೆ ಹಾಗು ಶೌಚಾಲಯ ಸ್ವಚ್ಚತೆ ಮಾಡಲು ಮಕ್ಕಳನ್ನು ಮಾತ್ರ ಬಳಸಿಲ್ಲ. ಮುಖ್ಯಶಿಕ್ಷಕರು ಸೇರಿದಂತೆ ಶಾಲೆಯ ಶಿಕ್ಷಕರೆಲ್ಲಾ ಸೇರಿ ಸ್ವಚ್ಚಗೊಳಿಸುವ ಕೆಲಸ ಮಾಡಿದ್ದೇವೆ. ಶಾಲೆಗೆ ಅಗತ್ಯವಾಗಿ ಬೇಕಾಗಿರುವ ನೀರು ಸೇರಿದಂತೆ ಶಾಲಾ ಆವರಣ ಹಾಗು ಕೊಠಡಿ ಸ್ವಚ್ಚಗೊಳಿಸಲು ಯಾವುದೇ ಹೆಚ್ಚುವರಿ ಸಿಬ್ಬಂದಿ ಇಲ್ಲ. ಶಾಲೆಯ ಮಕ್ಕಳಿಗಾಗಿ ಇರುವ ಶೌಚಾಲಯಗಳು ಸಹ ಶಿಥಿಲಗೊಂಡಿದ್ದು ನೂತನ ಶೌಚಾಲಯ ನಿರ್ಮಾಣಕ್ಕಾಗಿ ಇಲಾಖೆಗೆ ಪತ್ರ ಬರೆಯಲಾಗಿದೆ.
ಮಕ್ಕಳ ಪೋಷಕರ ಮನವಿಯ ಮೇರೆಗೆ ಆದಷ್ಟು ಬೇಗ ಶಾಲಾಭಿವೃದ್ದಿ ಸಮಿತಿಯ ನೇತೃತ್ವದಲ್ಲಿ ಪೋಷಕರ ಸಭೆಯೊಂದನ್ನು ಕರೆದು ಶಾಲೆಯ ಹಾಗು ಶಾಲೆಯಲ್ಲಿನ ಮಕ್ಕಳ ಬಗ್ಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಯತ್ನಿಸುವುದಾಗಿ ಹೇಳಿದ ನಂತರ ಪ್ರತಿಭಟನೆ ಕೈ ಬಿಡಲಾಯಿತು.
ಈ ಸಂದರ್ಭದಲ್ಲಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಎಂ.ಮೂರ್ತಿ, ಪೋಷಕರಾದ ಮಂಜುನಾಥ್, ಹರೀಶ್, ನರಸಿಂಹ, ಆನಂದ, ವೆಂಕಟೇಶ್, ಆನಿಲ್ ಹಾಜರಿದ್ದರು.