Sidlaghatta : ಶಿಡ್ಲಘಟ್ಟ ನಗರದ ವಿವಿದೆಡೆ ದಿಢೀರ್ ದಾಳಿ ನಡೆಸಿದ ಆರೋಗ್ಯ ಇಲಾಖೆ ಹಾಗೂ ತಂಬಾಕು ನಿಯಂತ್ರಣ ಘಟಕದ ಅಧಿಕಾರಿಗಳು ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ತಂಬಾಕು ನಿಯಂತ್ರಣದ ನಿಯಮಗಳನ್ನು ಉಲ್ಲಂಘಿಸಿದವರಿಂದ ದಂಡ ವಸೂಲಿಮಾಡಿದ್ದಾರೆ.
ಈ ವೇಳೆ ಮಾತನಾಡಿದ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್. ದೇವರಾಜ್, ಶಾಲಾ ಕಾಲೇಜುಗಳು, ಧಾರ್ಮಿಕ ಕೇಂದ್ರಗಳ ಆಸುಪಾಸಿನಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಬಾರದು, ಮುಖ್ಯವಾಗಿ ಅಪ್ರಾಪ್ತರಿಗೆ ಯಾವುದೆ ರೀತಿಯ ಬೀಡಿ ಸಿಗರೇಟು ಇನ್ನಿತರೆ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡಬಾರದು, ಬಳಸುವಂತೆ ಉತ್ತೇಜಿಸುವುದನ್ನೂ ಮಾಡಬಾರದು ಎಂದರು.
ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆ ನಿಷೇಧಿಸಿದ್ದು ಈ ಬಗ್ಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಎಲ್ಲ ಅಂಗಡಿ ಹೋಟೆಲ್ ಕ್ಯಾಂಟೀನ್ ಕಾಂಡಿಮೆಂಟ್ ಗಳಲ್ಲಿ ಬೋರ್ಡನ್ನು ಪ್ರದರ್ಶಿಸಬೇಕು, ಇಲ್ಲವಾದಲ್ಲಿ ದಂಡ ವಿಧಿಸಲಾಗುತ್ತದೆ ಎಂದು ಹೇಳಿದರು.
ಒಟ್ಟು 20 ಪ್ರಕರಣಗಳಿಗೆ ಸೆಕ್ಷನ್ 4ರ ಅಡಿಯಲ್ಲಿ 650 ರೂ, ಸೆಕ್ಷನ್ 6ಎ ಅಡಿಯಲ್ಲಿ 750 ರೂ, ಸೇರಿ ಒಟ್ಟು 1,400 ರೂ. ದಂಡ ವಸೂಲಿ ಮಾಡಲಾಯಿತು. ಅಂಗಡಿಗಳ ಮುಂದೆ ಪ್ರದರ್ಶಿಸುವ ಬೋರ್ಡ್‌ಗಳನ್ನು ವಿತರಿಸಲಾಯಿತು.
ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ರಾಘವೇಂದ್ರ, ಮಂಜುನಾಥ್, ಆರೋಗ್ಯ ಇಲಾಖೆಯ ಸುನಿಲ್, ಕೀರ್ತಿ, ಮಂಜುನಾಥ್ ದಾಳಿಯಲ್ಲಿ ಭಾಗವಹಿಸಿದ್ದರು.