Sidlaghatta : ದೇವರ ಪೂಜೆ ಮತ್ತು ಆರಾಧನೆಯನ್ನೇ ನಂಬಿ ಬದುಕುತ್ತಿರುವ ಅರ್ಚಕರು ಮತ್ತು ಆಗಮಿಕರ ನೋವಿಗೆ ಸರ್ಕಾರ ಸ್ಪಂದಿಸಬೇಕು. ನಮ್ಮ ಬಗ್ಗೆ ನಿರಾಸಕ್ತಿ ತೋರಬಾರದು ಎಂದು ತಾಲ್ಲೂಕು ಅರ್ಚಕರ, ಆಗಮಿಕರ ಮತ್ತು ಉಪದಿವಂತರ ಒಕ್ಕೂಟದ ಅಧ್ಯಕ್ಷ ಕೆ.ವಿ.ಸತ್ಯನಾರಾಯಣಾಚಾರ್ ತಿಳಿಸಿದರು.
ನಗರದಿಂದ ಸೋಮವಾರ ಅರ್ಚಕರ, ಆಗಮಿಕರ ಮತ್ತು ಉಪದಿವಂತರ ಒಕ್ಕೂಟದ ರಾಜ್ಯ ಸಮಾವೇಶಕ್ಕೆ ಬೆಂಗಳೂರಿಗೆ ತೆರಳುವ ಮುಂಚೆ ಅವರು ಮಾತನಾಡಿದರು.
ಅರ್ಚಕ ವೃತ್ತಿ ಪವಿತ್ರವಾದದ್ದು. ಅರ್ಚಕರಾದವರು ದೇವರು ಮತ್ತು ಭಕ್ತರ ನಡುವೆ ಸೇತುಬಂಧರಂತೆ ಇರುತ್ತಾರೆ. ತಮ್ಮ ಕಷ್ಟಕೋಟಲೆ ಮತ್ತು ಸಂಕಷ್ಟಗಳನ್ನು ಬದಿಗಿರಿಸಿ ಧಾಮಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಆದರೆ ನೆಮ್ಮದಿಯ ಬದುಕು ರೂಪಿಸಿಕೊಳ್ಳಲು ಸರ್ಕಾರದ ನೆರವು ಅಗತ್ಯವಿದೆ ಎಂದರು.
ತಾಲ್ಲೂಕು ಅರ್ಚಕರ, ಆಗಮಿಕರ ಮತ್ತು ಉಪದಿವಂತರ ಒಕ್ಕೂಟದ ಸಹಕಾರ್ಯದರ್ಶಿ ಎಸ್.ಸತ್ಯನಾರಾಯಣರಾವ್ ಮಾತನಾಡಿ, ನಿರಂತರ ಬೆಲೆ ಏರಿಕೆಯಿಂದ ದಿನನಿತ್ಯದ ಪೂಜಾ ಸಾಮಗ್ರಿಗಳ ಬೆಲೆ ಗಗನಕ್ಕೇರಿದ್ದು ತಸ್ತಿಕ್ ಹಣ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ. ಮುಖ್ಯಮಂತ್ರಿ ಅವರಿಗೆ ಮನವಿಯನ್ನು ಸಲ್ಲಿಸಲಿದ್ದೇವೆ, ತಾಲ್ಲೂಕಿನ ಮೇಲೂರು ಮಳ್ಳೂರು ಹಾಗೂ ಇತರೆಡೆಗಳಿಂದಲೂ ಅರ್ಚಕರು ನಮ್ಮ ಜೊತೆಗೂಡಲಿದ್ದಾರೆ ಎಂದರು.
ತಾಲ್ಲೂಕು ಅರ್ಚಕರ, ಆಗಮಿಕರ ಮತ್ತು ಉಪದಿವಂತರ ಒಕ್ಕೂಟದ ಸದಸ್ಯರುಗಳಾದ ಬಿ.ಕೃಷ್ಣಮೂರ್ತಿ, ಎ.ವಿ.ವೆಂಕಟೇಶಮೂರ್ತಿ, ಎ.ಎಸ್.ವೆಂಕಟೇಶಮೂರ್ತಿ, ರಾಮದಾಸ್, ಕೃಷ್ಣನ್, ಕುಂದಲಗುರ್ಕಿ ವೆಂಕಟೇಶ್, ರಾಮಾಂಜಿನಾಚಾರ್, ವಿ.ನಾಗರಾಜಶರ್ಮ, ವೈ.ಡಿ.ಶ್ರೀವತ್ಸನಾರಾಯಣ, ಬಸವರಾಜ್, ಮುನಿಕೃಷ್ಣಪ್ಪ, ರವೀಂದ್ರ ಹಾಜರಿದ್ದರು.