
Sidlaghatta : ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಸರಿಯಾದ ರೀತಿಯಲ್ಲಿ ಶೈಕ್ಷಣಿಕ ಮಾರ್ಗದರ್ಶನ ಮತ್ತು ವೃತ್ತಿ ಮಾರ್ಗದರ್ಶನ ಸಿಗುವಂತಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್ ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆ, ಚೈಲ್ಡ್ ರೈಟ್ಸ್ ಟ್ರಸ್ಟ್ ಹಾಗೂ ಇಂಡಿಯಾ ಲಿಟ್ರೆಸಿ ಪ್ರಾಜೆಕ್ಟ್ ನ ಆಶ್ರಯದಲ್ಲಿ ನಗರದಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲ್ಲೂಕಿನ ಪ್ರೌಢಶಾಲಾ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಶೈಕ್ಷಣಿಕ ಮತ್ತು ವೃತ್ತಿ ಮಾರ್ಗದರ್ಶನದ ಒಂದು ದಿನದ ತರಬೇತಿ ಕಾರ್ಯಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಸಾಕಷ್ಟು ವಿದ್ಯಾರ್ಥಿಗಳ ಕುಟುಂಬಗಳಲ್ಲಿ ಪೋಷಕರು ಅನಕ್ಷರಸ್ಥರು ಅಥವಾ ಕನಿಷ್ಠ ಶಿಕ್ಷಣ ಪಡೆದವರಾಗಿರುತ್ತಾರೆ. ಅಂತಹ ಕುಟುಂಬಗಳ ಹಿನ್ನಲೆಯಲ್ಲಿನ ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ವೃತ್ತಿ ಮಾರ್ಗದರ್ಶನ ಕೊರತೆ ಬಹಳಷ್ಟು ಕಾಡುತ್ತಿರುತ್ತದೆ ಎಂದರು.
ಅಂತಹ ಎಲ್ಲ ವಿದ್ಯಾರ್ಥಿಗಳಿಗೂ ಶಿಕ್ಷಣ ಹಾಗೂ ವೃತ್ತಿ ಶಿಕ್ಷಣ ಕೊರತೆಯಿಂದ ಯಾವ ಕೋರ್ಸ್ ತೆಗೆದುಕೊಂಡರೆ ಸೂಕ್ತ ಎನ್ನುವುದಾಗಲಿ, ಯಾವ ಶಿಕ್ಷಣ ಪಡೆದರೆ ಯಾವ ಉದ್ಯೋಗ ಸಿಗಲಿದೆ ಎಂಬಿತ್ಯಾದಿ ಮಾರ್ಗದರ್ಶನ ಸಿಗಬೇಕಿದೆ ಎಂದು ಹೇಳಿದರು.
ಈ ನಿಟ್ಟಿನಲ್ಲಿ ಪ್ರೌಢಶಾಲಾ ಶಿಕ್ಷಕರಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿದ್ದು ನೀವು ಈ ತರಬೇತಿಯಲ್ಲಿ ಪಡೆದ ಜ್ಞಾನ ಮಾಹಿತಿಯನ್ನು ಮಕ್ಕಳಿಗೆ ಸಮರ್ಪಕವಾಗಿ ನೀಡುವಂತಾಗಬೇಕು ಎಂದು ತಿಳಿಸಿದರು.
ಕ್ಷೇತ್ರ ಸಮನ್ವಯಾಕಾರಿ ತ್ಯಾಗರಾಜ್, ಶಿಕ್ಷಣ ಸಂಯೋಜಕಿ ಪರಿಮಳ, ಚೈಲ್ಡ್ ರೈಟ್ಸ್ ಟ್ರಸ್ಟ್ ಸಂಸ್ಥೆಯ ಸಂಯೋಜಕ ಜಯರಾಮ್ ಸತೀಶ್, ರಾಮಕೃಷ್ಣಪ್ಪ, ರವೀಂದ್ರನಾಥ್, ಗಾಯಿತ್ರಿ, ನಿರ್ಮಲ, ಕಾಂತರಾಜು ಹಾಗೂ ಪ್ರೌಢಶಾಲಾ ಶಿಕ್ಷಕರು ಭಾಗವಹಿಸಿದ್ದರು.