Sidlaghatta : ಶಿಡ್ಲಘಟ್ಟ ತಾಲ್ಲೂಕಿನ 78 ಹಳ್ಳಿಗಳಲ್ಲಿನ ಸರ್ಕಾರಿ ಶಾಲೆಗಳ ಕಟ್ಟಡಗಳು ಮತ್ತು ಅಂಗನವಾಡಿ ಕಟ್ಟಡಗಳ ನಿರ್ಮಾಣದ ಅಗತ್ಯವಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅವರು ಪಟ್ಟಿ ನೀಡಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಮುಂದಿನ ಬಜೆಟ್ ನಂತರ ಕೈಗಾರಿಕೆಗಳ CSR ಅನುದಾನದಲ್ಲಿ ಹಣ ಒದಗಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ನಗರದ ಹೊರವಲಯದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಶೈಕ್ಷಣಿಕವಾಗಿ ಮೂಲ ಭೂತ ಸೌಕರ್ಯ ಒದಗಿಸಲು ಬದ್ಧನಾಗಿದ್ದೇನೆ. ನಮ್ಮ ತಾಲ್ಲೂಕಿನ ಮಕ್ಕಳು ಕಲಿಕೆಯಲ್ಲಿ ಅತ್ಯುತ್ತಮರಾಗುವಂತೆ ಶಿಕ್ಷಕರು ಪರಿಶ್ರಮ ಹಾಕಬೇಕು. ನಮ್ಮ ವಿದ್ಯಾರ್ಥಿಗಳು ಒಳ್ಳೆಯ ಸಾಧಕರಾಗುವಂತೆ ಶಿಕ್ಷಕರು ಪ್ರೇರಣೆ, ಮಾರ್ಗದರ್ಶನ, ಆತ್ಮಸ್ಥೈರ್ಯ ತುಂಬಬೇಕು. ಶಿಡ್ಲಘಟ್ಟ ತಾಲ್ಲೂಕನ್ನು ಶಿಕ್ಷಣ ಕ್ಷೇತ್ರದಲ್ಲಿ ಪ್ರಥಮ ಸ್ಥಾನಕ್ಕೆ ಕೊಂಡೊಯ್ಯುವ ಕಾರ್ಯದಲ್ಲಿ ಶಿಕ್ಷಕರು ನೆರವಾಗಬೇಕು ಎಂದರು.
ಸಂಸದ ಎಂ.ಮಲ್ಲೇಶ್ ಬಾಬು ಮಾತನಾಡಿ, ಶಿಕ್ಷಕರು ಉತ್ತಮ ಅಭ್ಯಾಸನಿರತರಾಗಬೇಕು ಮತ್ತು ಅಧ್ಯಯನಶೀಲರಾಗಬೇಕು. ನಿಮ್ಮನ್ನು ನೋಡಿ ಮಕ್ಕಳು ಪ್ರಭಾವಿತರಾಗುತ್ತಾರೆ ಎಂದರು.
ತಹಶೀಲ್ದಾರ್ ಬಿ.ಎನ್.ಸ್ವಾಮಿ ಮಾತನಾಡಿ, ಉತ್ತಮ ಶಿಕ್ಷಕ ವೃಂದವಿದ್ದಲ್ಲಿ ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗುತ್ತಾರೆ. ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಡಿ. ಉತ್ತಮ ನಡವಳಿಕೆಗಳು ಹಾಗೂ ಮೌಲ್ಯಗಳು ಮಕ್ಕಳ ಮನದಲ್ಲಿ ಬೇರೂರುವಂತೆ ಮಾಡಬೇಕಿದೆ ಎಂದು ಹೇಳಿದರು.
ವಿಜಯಪುರ ಸಾಯಿ ಜ್ಞಾನ ಗಂಗಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎನ್ ಶ್ರೀನಿವಾಸಮೂರ್ತಿ ವಿಶೇಷ ಉಪನ್ಯಾಸ ನೀಡಿ, ಉಕ್ತಿಗಳು, ಸೂಕ್ತಿಗಳು ಹಾಗೂ ನೈಜ ಘಟನೆಗಳ ಮೂಲಕ ಶಿಕ್ಷಕರ ಜವಾಬ್ದಾರಿಗಳ ಕುರಿತು ಮಾತನಾಡಿದರು.
ಈ ವರ್ಷ ನಿವೃತ್ತರಾದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರನ್ನು ಸನ್ಮಾನಿಸಲಾಯಿತು. ವಿವಿಧ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಶಿಕ್ಷಕರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶಿಕ್ಷಕರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ. ನರೇಂದ್ರ ಕುಮಾರ್, ಜಿಲ್ಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಉಪನಿರ್ದೇಶಕ ಪಿ. ಬೈಲಾಂಜಿನಪ್ಪ , ಡಯಟ್ ನ ಪ್ರಾಂಶುಪಾಲ ಮುನಿಕೆಂಪೇಗೌಡ, ಬಂಕ್ ಮುನಿಯಪ್ಪ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ನಗರಸಭಾ ಅಧ್ಯಕ್ಷ ವೆಂಕಟಸ್ವಾಮಿ, ಉಪಾಧ್ಯಕ್ಷೆ ರೂಪ ನವೀನ್, ಪ್ರೌಢಶಾಲಾ ಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಲ್. ವೆಂಕಟರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಚ್.ಎಸ್. ರುದ್ರೇಶ ಮೂರ್ತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ. ಆರ್. ನಾರಾಯಣಸ್ವಾಮಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ. ಎನ್. ಸುಬ್ಬಾರೆಡ್ಡಿ, ತಾಲ್ಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆಂಜನೇಯ, ಬಿ ಆರ್ ಸಿ ಸಮನ್ವಯಾಧಿಕಾರಿ ಲಕ್ಷ್ಮೀನಾರಾಯಣ್, ಶಿಕ್ಷಣ ಸಂಯೋಜಕ ಮಂಜುನಾಥ್, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಮೇಲೂರು ಮಂಜುನಾಥ್, ಕೆ.ಲಕ್ಷ್ಮೀನಾರಾಯಣರೆಡ್ಡಿ ಪರಿಮಳ, ಬಿ ಆರ್ ಪಿ ಕೆ. ಮಂಜುನಾಥ್, ವಿವಿಧ ಸಂಘಗಳ ಪದಾಧಿಕಾರಿಗಳು, ನಗರಸಭೆ ಸದಸ್ಯರು ಹಾಜರಿದ್ದರು.