ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಬುಧವಾರ ರಾಷ್ಟ್ರೀಯ ನಾಡ ಹಬ್ಬಗಳ ಆಚರಣ ಸಮಿತಿ ವತಿಯಿಂದ ಆಚರಿಸಿದ ದಲಿತ ವಚನಕಾರರ ಜಯಂತಿ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಬಿ.ಎಸ್ ರಾಜೀವ್ ಮಾತನಾಡಿದರು.
ದಲಿತ ವಚನಕಾರರು ಸಮಾಜದಲ್ಲಿ ತಳವೂರಿದ ಅನೇಕ ಸಮಸ್ಯೆಗಳ ಜೊತೆಗೆ ಅಸಮಾನತೆ ಮತ್ತು ತಾರತಮ್ಯವನ್ನು ತೊಡೆದುಹಾಕಲು ಶ್ರಮಿಸಿದರು. ಆದರ್ಶ ವ್ಯಕ್ತಿಗಳು, ಸಮಾಜ ಸುಧಾರಕರು, ಶರಣರ ವಚನಗಳನ್ನು ಪಾಲಿಸುವ ಮೂಲಕ ಉತ್ತಮ ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕಿದೆ ಎಂದು ಅವರು ತಿಳಿಸಿದರು.
ದಲಿತ ಮುಖಂಡ ಮೇಲೂರು ಮಂಜುನಾಥ ಮಾತನಾಡಿ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಇಂದಿಗೂ ಹಳ್ಳಿಗಳಲ್ಲಿ ಬಡವರು, ಅಸಮಾನತೆಯಲ್ಲಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಅಸಮಾನತೆ ವಿರುದ್ದ ನಿರಂತರ ಶ್ರಮಿಸಿದ ಹಿರಿಯರನ್ನು ಗುರುತಿಸಿ ಅವರನ್ನು ಸೇರಿಸಿಕೊಂಡು ಇಂತಹ ಕಾರ್ಯಕ್ರಮಗಳನ್ನು ಮಾಡಿದಾಗ ಅರ್ಥಪೂರ್ಣವಾಗುತ್ತದೆ. ಈ ನಿಟ್ಟಿನಲ್ಲಿ ವಿಶೇಷವಾಗಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಜವಬ್ದಾರಿಯಿಂದ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.
ದಲಿತ ಮುಖಂಡ ವೆಂಕಟೇಶ್ ಮಾತನಾಡಿ, ದಲಿತ ವಚನಕಾರರು ಯಾವುದೇ ಜಾತಿ ಮತ್ತು ಸಮುದಾಯಕ್ಕೆ ಸೀಮಿತವಾಗಿಲ್ಲ. ಸಮಾಜಮುಖಿಯಾಗಿದ್ದರು. ಅಂತಹವರ ಜಯಂತಿಗಳು ತಾಲ್ಲೂಕಿನ ಎಲ್ಲಾ ಇಲಾಖಾ ಅಧಿಕಾರಿಗಳು ಪಾಲ್ಗೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಆಡಳಿತ ವತಿಯಿಂದ, ಪತ್ರಕರ್ತ ಕೋಟಹಳ್ಳಿ ಅನಿಲ್ ಕುಮಾರ್, ರೈತ ಮುಖಂಡ ಭಕ್ತರಹಳ್ಳಿ ಪ್ರತೀಶ್, ದಲಿತ ಮುಖಂಡರಾದ ಮೇಲೂರು ಮಂಜುನಾಥ್, ನಡಿಪಿನಾಯಕನಹಳ್ಳಿ ಎನ್.ಎ ವೆಂಕಟೇಶ್, ರಾಜಕುಮಾರ್, ಮುಂತಾದವರನ್ನು ಸನ್ಮಾನಿಸಲಾಯಿತು.
ಪ್ರೊಬೆಷನರಿ ತಹಶೀಲ್ದಾರ್ ಅರ್ಚನಾ ಭಟ್, ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ಹಕ್ಕುದಾಖಲೆ ಶಿರಸ್ತೆದಾರ್ ಮಂಜುನಾಥ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಮೂರ್ತಿ, ರಾಜಸ್ವ ನಿರೀಕ್ಷಕ ಪ್ರಶಾಂತ್, ವೇಣು, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ರಂಗನಾಥ್, ಸಮಾಜ ಕಲ್ಯಾಣ ಇಲಾಖೆಯ ವಾರ್ಡನ್ ನಾರಾಯಣಸ್ವಾಮಿ, ಕಂದಾಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು.