Sidlaghatta : ಪಾಪಾಗ್ನಿ ನದಿ ತಟದ ಮೇಲೆ ನೆಲೆಸಿರುವ, ಇತಿಹಾಸ ಪ್ರಸಿದ್ದ ತಲಕಾಯಲಬೆಟ್ಟದ ಶ್ರೀವೆಂಕಟರಮಣಸ್ವಾಮಿಯ ಶ್ರೀಮತ್ಕಲ್ಯಾಣ ಬ್ರಹ್ಮರಥೋತ್ಸವವು ಸಡಗರ ಸಂಭ್ರಮದಿಂದ ಬುಧವಾರ ನೆರವೇರಿತು. ನಾಡಿನ ಮೂಲೆ ಮೂಲೆಯಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಬ್ರಹ್ಮ ರಥೋತ್ಸವಕ್ಕೆ ಸಾಕ್ಷಿಯಾದರು.
ಶ್ರೀದೇವಿ ಭೂದೇವಿಯೊಂದಿಗೆ ಪ್ರಸನ್ನನಾಗಿರುವ ವೆಂಕಟರಮಣಸ್ವಾಮಿಯ ಮೂರ್ತಿಗೆ ವಿಶೇಷ ಹೂವಿನ ಅಲಂಕಾರ, ಪೂಜೆ ನೆರವೇರಿಸಿ ಮಹಾ ಮಂಗಳಾರತಿ ಮಾಡಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು. ನಂತರ ಉತ್ಸವ ಮೂರ್ತಿಗಳನ್ನು ಅಲಂಕೃತ ತೇರಿನಲ್ಲಿ ಪ್ರತಿಷ್ಠಾಪಿಸಲಾಯಿತು.
ಬ್ರಹ್ಮರಥೋತ್ಸವಕ್ಕೆ ತಹಶೀಲ್ದಾರ್ ಬಿ.ಎನ್.ಸ್ವಾಮಿ ಚಾಲನೆ ನೀಡಿದರು. ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ, ಶಾಸಕ ಬಿ.ಎನ್.ರವಿಕುಮಾರ್, ಕಾಂಗ್ರೆಸ್ ಮುಖಂಡ ರಾಜೀವ್‌ಗೌಡ, ಕಾಂಗ್ರೆಸ್ ಮುಖಂಡರ ಪುಟ್ಟು ಆಂಜಿನಪ್ಪ, ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಿ.ಪಿ.ನಾಗರಾಜ್ ಜತೆಗೂಡಿದರು.
ತೇರನ್ನು ಎಳೆಯುತ್ತಿದ್ದಂತೆ ನೆರೆದಿದ್ದ ಭಕ್ತರ ಭಕ್ತಿಯ ಭಾವ ಮುಗಿಲು ಮುಟ್ಟಿತು. ರಥದ ಹಗ್ಗ ಹಿಡಿದು ಎಳೆದು ಭಕ್ತಿಯಭಾವ ಪರವಶರಾದರು. ಬಾಳೆ ಹಣ್ಣು ದವನವನ್ನು ತೇರಿನ ತುತ್ತ ತುದಿಯಲ್ಲಿನ ಕಳಶಕ್ಕೆ ತಾಗುವಂತೆ ಎಸೆದು ಬದುಕಿನಲ್ಲಿನ ಎಲ್ಲ ಇಷ್ಟಾರ್ಥಗಳು ಈಡೇರಿಸುವಂತೆ ಭಗವಂತನಲ್ಲಿ ಕೈ ಮುಗಿದು ಬೇಡಿಕೊಂಡರು.
ದೇವಾಲಯದ ಸುತ್ತಲೂ ಒಂದು ಸುತ್ತು ಪ್ರದಕ್ಷಿಣೆ ಹಾಕಿದ ರಥದ ಹಗ್ಗ ಹಿಡಿದು ಎಳೆದ ಭಕ್ತರು ಭಗವಂತನ ಜಪ ಮಾಡುತ್ತಾ ಭಕ್ತಿ ಸಾಗರದಲ್ಲಿ ಮಿಂದೆದ್ದರು.
ಜಾತ್ರೆ ಅಂಗವಾಗಿ ಬುರುಗು, ಬತ್ತಾಸು, ಜಿಲೇಬಿ, ಮೈಸೂರು ಪಾಕು, ಕಬ್ಬಿನ ಹಾಲು, ಮಕ್ಕಳ ಆಟಿಕೆ, ಹೆಣ್ಣು ಮಕ್ಕಳ ಶೃಂಗಾರದ ವಸ್ತುಗಳ ಅಂಗಡಿಗಳು ತಲೆ ಎತ್ತಿದ್ದವು. ಬಿಸಿಲ ಬೇಗೆಯನ್ನು ತಣಿಸುವ ಐಸ್ ಕ್ರೀಂ, ಕಲ್ಲಂಗಡಿ ಹಣ್ಣಿನ ಅಂಗಡಿ ಸೇರಿದಂತೆ ಹಣ್ಣಿನ ಜ್ಯೂಸ್ ಅಂಗಡಿಗಳು ಸಾಕಷ್ಟಿದ್ದವು.
ದೇವಾಲಯದ ವ್ಯವಸ್ಥಾಪನಾ ಸಮಿತಿಯಿಂದಲ್ಲದೆ ಅನೇಕ ದಾನಿಗಳು ಬ್ರಹ್ಮರಥೋತ್ಸವಕ್ಕೆ ಆಗಮಿಸಿದ್ದ ಎಲ್ಲ ಭಕ್ತರಿಗೂ ಸಾಮೂಹಿಕ ಅನ್ನ ಸಂತರ್ಪಣೆ, ಪ್ರಸಾದ ವಿನಿಯೋಗವನ್ನು ಹಮ್ಮಿಕೊಂಡಿದ್ದರು.