Sidlaghatta : ಮಕ್ಕಳು ಬೇಸಿಗೆಯ ರಜೆಯಲ್ಲಿ ಕೇವಲ ಮೊಬೈಲ್ ಹಿಡಿದಿರಬಾರದು. ಅವರಿಗೆ ಆತ್ಮರಕ್ಷಣೆಯ ಕಲೆಯನ್ನು ಕಲಿಸುವುದರೊಂದಿಗೆ, ಶಿಸ್ತು, ಸಂಯಮ, ಸಂಸ್ಕಾರವನ್ನು ಶಿಬಿರದಲ್ಲಿ ಕಲಿಸಲಾಗಿದೆ ಎಂದು ಕರಾಟೆ ಶಿಕ್ಷಕ ಅರುಣ್ ಕುಮಾರ್ ತಿಳಿಸಿದರು.
ನಗರದ ಶ್ರೀ ಬಸವೇಶ್ವರ ದೇವಾಲಯದ ಆವರಣದಲ್ಲಿ ಬುಧವಾರ ಜೈ ಭಾರತ್ ಕರಾಟೆ ಮತ್ತು ಮಾರ್ಷಲ್ ಆರ್ಟ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ 25 ದಿನಗಳ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಮಕ್ಕಳಿಗೆ ಪ್ರಮಾಣಪತ್ರವನ್ನು ವಿತರಿಸಿ ಅವರು ಮಾತನಾಡಿದರು.
ಈ ಶಿಬಿರದಲ್ಲಿ 40ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಬೇಸಿಗೆ ಶಿಬಿರಗಳು ಮಕ್ಕಳ ದೈಹಿಕ ಚಟುವಟಿಕೆಗಳಿಗೆ ಅತ್ಯುತ್ತಮ ವೇದಿಕೆ ಕಲ್ಪಿಸಿಕೊಡುತ್ತದೆ. ಕರಾಟೆ ಕಲಿಕೆ ಮಕ್ಕಳ ಮೈ, ಮನಸ್ಸನ್ನು ಚುರುಕುಗೊಳಿಸುತ್ತದೆ. ಅವರ ಆತ್ಮವಿಶ್ವಾಸ ಹೆಚ್ಚುತ್ತದೆ. ಹೊಸ ಉತ್ಸಾಹ, ಚೈತನ್ಯ ತುಂಬುತ್ತದೆ. ಈಗಿನ ಮಕ್ಕಳು ದಿನದ ಬಹುತೇಕ ಅವಧಿಯನ್ನು ಟಿವಿ, ಕಂಪ್ಯೂಟರ್, ವಿಡಿಯೋ ಗೇಮ್ ಗಳ ಎದುರೇ ಕಳೆಯುತ್ತಾರೆ. ಇದರಿಂದ ಅವರು ಎಲ್ಲರ ಜತೆಗಿದ್ದರೂ ಏಕಾಂಗಿಯಾಗಿ ಬಿಟ್ಟಿರುತ್ತಾರೆ. ಬೇಸಿಗೆ ಶಿಬಿರಗಳು ಮಕ್ಕಳು ಒಂದಷ್ಟು ಸಮಯವನ್ನು ಪ್ರಕೃತಿಯ ನಡುವೆ ಕಳೆವಂತೆ ಮಾಡುತ್ತವೆ ಎಂದು ಅವರು ವಿವರಿಸಿದರು.