
Sugaturu, Sidlaghatta : ನಿಯಮಿತವಾದ ಕ್ರೀಡೆ, ಧ್ಯಾನ, ಯೋಗಾಭ್ಯಾಸದಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು, ವಿದ್ಯಾರ್ಥಿಗಳು ಪಾಠದ ಜೊತೆಗೆ ಸಹಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ತಿಳಿಸಿದರು.
ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಜೆ.ವೆಂಕಟಾಪುರ ಗ್ರಾಮಪಂಚಾಯಿತಿ ವತಿಯಿಂದ ಅಂತರಾಷ್ಟ್ರೀಯ ಆಟದ ದಿನದ ಅಂಗವಾಗಿ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ವಿವಿಧ ಕ್ರೀಡಾ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿದಿಸೆಯಲ್ಲಿ ಆಟಗಳು ಮಹತ್ವಪೂರ್ಣ ಪಾತ್ರ ವಹಿಸಲಿದ್ದು, ಸ್ವಯಂ ಮೌಲ್ಯ, ಆತ್ಮವಿಶ್ವಾಸ, ಸಾಮಾಜಿಕ ಸಾಮರಸ್ಯ, ಮಾನಸಿಕ ಶಿಸ್ತು, ಲಿಂಗಸಮಾನತೆಯಂತಹ ಮೌಲ್ಯಗಳೊಂದಿಗೆ ಸ್ಪರ್ಧಾಕೌಶಲಗಳನ್ನು ಬೆಳೆಸಿಕೊಳ್ಳಲು ಸಹಾಯಕವಾಗಲಿವೆ. ಗ್ರಾಮೀಣ ಕ್ರೀಡೆಗಳಲ್ಲಿ ಮಕ್ಕಳು ಹೆಚ್ಚೆಚ್ಚು ತೊಡಗಿಸಿಕೊಳ್ಳಬೇಕು ಎಂದರು.
ಗ್ರಾಮಪಂಚಾಯಿತಿ ಕಾರ್ಯದರ್ಶಿ ವೆಂಕಟರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ಪ್ರಭಾವ, ಮೊಬೈಲ್‌ಫೋನ್‌ಗಳ ಚಟಗಳಿಗೆ ಬೀಳುವುದರಿಂದ ಸಮಯದ ಸದ್ಬಳಕೆ, ಸರ್ವತೋಮುಖ ಪ್ರಗತಿಗಾಗಿ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು. ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪೋಷಕರ ಮೇಲಿದೆ. ಕಲೆ, ಸಂಗೀತ, ಕ್ರೀಡೆಗಳಂತಹ ಕ್ಷೇತ್ರಗಳಲ್ಲಿ ಹೆಚ್ಚು ಸಾಧನೆ ಮಾಡಲು ಅವಕಾಶಗಳಿದ್ದು ಅವುಗಳನ್ನು ಬಳಸಿಕೊಳ್ಳಬೇಕು ಎಂದರು.
ಶಿಕ್ಷಕ ಟಿ.ಎಂ.ಮಧು, ಎ.ಬಿ.ನಾಗರಾಜ, ಬಿ.ನಾಗರಾಜು, ಶಿಕ್ಷಕಿ ತಾಜೂನ್ ಮತ್ತಿತರರು ಇದ್ದರು. ವಿದ್ಯಾರ್ಥಿಗಳಿಗಾಗಿ ಕಬಡ್ಡಿ, ಕ್ರಿಕೆಟ್, ಖೋಖೋ, ಸಂಗೀತಕುರ್ಚಿ, ಕಪ್ಪೆಓಟ, ನಿಂಬೆಹಣ್ಣು ಸ್ಪೂನ್ ಮತ್ತಿತರ ಆಟಗಳನ್ನು ಆಡಿಸಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.