Sugaturu, Sidlaghatta : ನಾವು ವಾಸಿಸುವ ಮನೆಯ ನೆರೆಹೊರೆಯಲ್ಲಿ ಖಾಲಿ ತೆಂಗಿನಕಾಯಿ ಚಿಪ್ಪು, ಹಳೆಯ ಟೈರು, ಹೂವಿನ ಕುಂಡ, ಪ್ಲಾಸ್ಟಿಕ್ ಕವರ್‌ನಂತಹ ವಸ್ತುಗಳಲ್ಲಿ ಹೆಚ್ಚು ದಿನಗಳ ಕಾಲ ನೀರು ನಿಲ್ಲುವುದರಿಂದ ಸೊಳ್ಳೆಗಳ ಸಂತಾನ ವೃದ್ಧಿಯಾಗದಂತೆ ನೋಡಿಕೊಳ್ಳುವುದು ಅಗತ್ಯ ಎಂದು ಜಂಗಮಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಂಬಿಕಾ ತಿಳಿಸಿದರು.
ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಕಾರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಡೆಂಗ್ಯು, ಚಿಕನ್ ಗುನ್ಯಾ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹಳ್ಳಿಗಳಲ್ಲಿ ನೀರಿನ ಲಭ್ಯತೆ ಕಡಿಮೆ ಇದ್ದು ಬಳಕೆಗಾಗಿ ನೀರನ್ನು ದೊಡ್ಡ ಡ್ರಂಗಳಲ್ಲಿ ಅನೇಕ ದಿನಗಳವರೆಗೆ ಸಂಗ್ರಹಿಸಿಡುವುದರಿಂದ ಸೊಳ್ಳೆಗಳ ವೃದ್ಧಿಯಾಗಿ ಡೆಂಗ್ಯು, ಚಿಕನ್ ಗುನ್ಯಾದಂತಹ ಕಾಯಿಲೆಗಳು ಹರಡಬಹುದಾಗಿದೆ. ಡ್ರಂಗಳಲ್ಲಿ ನೀರು ಸಂಗ್ರಹಿಸಿದರೆ ಗಾಳಿ ಹೋಗದಂತೆ ಭದ್ರವಾದ ಮುಚ್ಚಳಗಳನ್ನು ಹಾಕಬೇಕು. ಕನಿಷ್ಟ ಎರಡು ದಿನಗಳಿಗೊಮ್ಮೆ ಬೇರೆ ಪಾತ್ರೆ ವರ್ಗಾಯಿಸಿ ಸೋಸಿ ಸಂಗ್ರಹಿಸಬೇಕು. ಸೊಳ್ಳೆಗಳ ಲಾರ್ವಾಗಳು ಉತ್ಪತ್ತಿಯಾಗುವ ಲಕ್ಷಣಗಳಿದ್ದಲ್ಲಿ ಸೊಳ್ಳೆಗಳನ್ನು ತಿನ್ನಬಲ್ಲ ಗಪ್ಪಿ ಪ್ರಭೇದದ ಮೀನುಗಳನ್ನು ನೀರಿನಲ್ಲಿ ಬಿಡಬೇಕು. ಡೆಂಗ್ಯು ತಡೆಗಟ್ಟುವಲ್ಲಿ ಸಾರ್ವಜನಿಕರ ಪಾತ್ರ ಮಹತ್ವದ್ದು ಎಂದರು.
ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ವಸಡಿನಲ್ಲಿ ರಕ್ತ ಬರುವುದು, ಜ್ವರ, ಸ್ನಾಯುನೋವಿನಂತಹ ಲಕ್ಷಣಗಳು ಕಾಣಿಸಿಕೊಂಡರೆ ತಡಮಾಡದೇ ರಕ್ತಪರೀಕ್ಷೆ ಮಾಡಿಸಿ ಹತ್ತಿರದ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು. ಸೊಳ್ಳೆಗಳ ಸಂತಾನ ವೃದ್ಧಿಯಾಗದಂತೆ ನೀರು ನಿಲ್ಲದಂತೆ ಜಾಗೃತೆ ವಹಿಸಬೇಕು. ಕಾಯಿಲೆ ಬರುವ ಮುನ್ನವೇ ಸಾಕಷ್ಟು ಮುನ್ನೆಚ್ಚರಿಕೆ ವಹಿಸುವುದು ಒಳ್ಳೆಯದು ಎಂದರು.
ಶುಶ್ರೂಷಕಿ ಆಶಾ ಮಾತನಾಡಿ, ಮೈಮುಚ್ಚುವ ತುಂಬುದೋಳಿನ ಬಟ್ಟೆಗಳನ್ನು ಧರಿಸುವುದರಿಂದ, ರಾತ್ರಿ ವೇಳೆ ಸೊಳ್ಳೆಪರದೆ, ಕಿಟಕಿಗಳಿಗೆ ಮೆಶ ಬಳಸುವುದರಿಂದ ಸೊಳ್ಳೆ ಕಡಿತದಿಂದ ದೂರವಿರಬಹುದು. ಮಕ್ಕಳ ದಿಸೆಯಲ್ಲಿ ಪೌಷ್ಟಿಕಾಂಶಯುತ ಆಹಾರ ಸೇವಿಸಬೇಕು. ಹಣ್ಣು, ತರಕಾರಿ ಹೆಚ್ಚೆಚ್ಚು ತಿನ್ನಬೇಕು. ರಸ್ತೆ ಬದಿ ಆಹಾರ, ಜಂಕ್ ಫುಡ್‌ಗಳನ್ನು ವರ್ಜಿಸಬೇಕು. ಅರ್ಹ ವಯಸ್ಸಿನ ಮಕ್ಕಳಿಗೆ ಆಗಿಂದಾಗ್ಗೆ ಇಲಾಖೆಯ ವತಿಯಿಂದಲೇ ಚುಚ್ಚುಮದ್ದು ಹಾಕಲಾಗುವುದು ಎಂದರು.
ಲಾರ್ವವುಳ್ಳ ನೀರನ್ನು ಸಂಗ್ರಹಿಸಿ ತಂದು ಗಪ್ಪಿ ಪ್ರಭೇದದ ಮೀನು ಬಿಟ್ಟು ತಿನ್ನುವ, ಸೊಳ್ಳೆ ನಿಯಂತ್ರಣ ಕುರಿತು ಪ್ರಾತ್ಯಕ್ಷಿಕೆ ಪ್ರದರ್ಶಿಸಿ ವಿವರಿಸಲಾಯಿತು.
ಆರೋಗ್ಯ ಕಾರ್ಯಕರ್ತೆ ಲಕ್ಷ್ಮಿದೇವಮ್ಮ, ಭಾಗ್ಯಮ್ಮ, ಶಿಕ್ಷಕ ಎ.ಬಿ.ನಾಗರಾಜ, ಟಿ.ಎಂ.ಮಧು, ಬಿ.ನಾಗರಾಜು, ಶಿಕ್ಷಕಿ ತಾಜೂನ್, ಗ್ರಾಮಸ್ಥ ಬಚ್ಚೇಗೌಡ ಹಾಜರಿದ್ದರು.