Sidlaghatta : ಪ್ರತಿಯೊಬ್ಬ ವ್ಯಕ್ತಿಯ ವಿಕಸನಕ್ಕೆ ಸತ್ಯ, ಅಹಿಂಸೆ, ಆಸ್ತೇಯದಂತಹ ವ್ರತಗಳೂ, ದೇಶದ ಪ್ರಗತಿಗೆ ರಚನಾತ್ಮಕ ಕಾರ್ಯಕ್ರಮಗಳೂ ಅಗತ್ಯವಿದೆ. ಗಾಂಧೀಜಿ ಕನಸಿನ ಭಾರತ ಕಾರ್ಯರೂಪಕ್ಕೆ ಬರಬೇಕು. ವಿಶ್ವದಲ್ಲಿ ಅಹಿಂಸಾ ಮಾರ್ಗದ ಮೂಲಕ ಭಾರತವು ಸ್ವಾತಂತ್ರ್ಯ ಪಡೆಯುವಲ್ಲಿ ಗಾಂಧೀಜಿ ನೀಡಿದ ಕೊಡುಗೆ, ತ್ಯಾಗ ಅಪೂರ್ವವಾದುದು, ಶಾಸ್ತ್ರೀಜಿಯವರು ಸರಳ ಸಜ್ಜನಿಕೆಯ ಪ್ರಾಮಾಣಿಕ ಆಡಳಿತಗಾರರಾಗಿದ್ದರು ಎಂದು ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ತಿಳಿಸಿದರು.
ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗಾಂಧಿಜಯಂತಿ, ಶಾಸ್ತ್ರೀಜಿ ಜಯಂತಿ, ವಿ.ಸೀತಾರಾಮಯ್ಯ ಜಯಂತಿ, ಬಾ-ಬಾಪು ಗಾಂಧಿದರ್ಶನ ಮತ್ತು ಬೆಳಗಾವಿ ಕಾಂಗ್ರೆಸ್ ಅಧಿವೇಶನ ಕುರಿತ ಲೇಖನ, ಪುಸ್ತಕ, ಚಿತ್ರಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ತತ್ವರಹಿತ ರಾಜಕೀಯ, ನೀತಿರಹಿತ ವಾಣಿಜ್ಯ, ಮಾನವತಾಶೂನ್ಯ ವಿಜ್ಞಾನ, ಶೀಲವಿಲ್ಲದ ಶಿಕ್ಷಣ, ದುಡಿಮೆಯಿಲ್ಲದ ಸಂಪತ್ತಿನಂತಹ ಸಾಮಾಜಿಕ ಪಾಪಗಳು ತೊಲಗಬೇಕು. ಗಾಂಧೀಜಿಯವರ ವ್ಯಕ್ತಿತ್ವ ಬದಲಾವಣೆ ಮಾಡಿದ ಶ್ರವಣಕುಮಾರನ ಪಿತೃಭಕ್ತಿಯಂತಹ ಮೌಲಿಕ ಕತೆ, ಕೃತಿಗಳ ಅಧ್ಯಯನವು ಇಂದಿನ ಮಕ್ಕಳಿಗೆ ಅಗತ್ಯವಿದೆ ಎಂದರು.
ವಿದ್ಯಾರ್ಥಿಗಳಿಗೆ ಪುಸ್ತಕ ಪ್ರದರ್ಶನ ಪೂರಕ: ತ್ಯಾಗ ಅಹಿಂಸೆಯ ಪ್ರತೀಕವಾಗಿವಾಗಿದ್ದ ಮಹಾತ್ಮ ಗಾಂಧೀಜಿಯವರ ಜೀವನವೇ ಒಂದು ಸಂದೇಶ. ಸತ್ಯ, ಪ್ರೇಮ, ಅಹಿಂಸೆ, ಸತ್ಯಾಗ್ರಹ, ಸರಳ ಜೀವನ, ಸ್ವಾವಲಂಬನೆಗಳಂತಹ ಗುಣಗಳನ್ನು ಹೋರಾಟಗಾರರು ಸ್ವಾತಂತ್ರ್ಯ ತಂದುಕೊಡಲು ಬಳಸಿಕೊಂಡರು.
ಗಾಂಧಿದರ್ಶನ ಪುಸ್ತಕ ಮತ್ತು ಚಿತ್ರಪ್ರದರ್ಶನವು ವಿದ್ಯಾರ್ಥಿಗಳಲ್ಲಿ ಪುಸ್ತಕಗಳ ಸಂಗ್ರಹ ಮತ್ತು ನಿರಂತರ ಅಧ್ಯಯನಶೀಲತೆಗೆ ಸಹಕಾರಿಯಾಗಲಿದೆ. ಪ್ರದರ್ಶನದಲ್ಲಿ ಕರ್ನಾಟಕದೊಂದಿಗಿನ ಗಾಂಧಿಯವರ ಒಡನಾಟ, ಮತ್ತಿತರ ಸಂದರ್ಭಗಳನ್ನು ಪ್ರದರ್ಶಿಸಿದ್ದು, ವಿವಿಧ ಕಲಿಕಾಮಾಧ್ಯಮದ ಮೂಲಕ ಗಾಂಧಿಮತ್ತು ಶಾಸ್ತ್ರೀಜಿಯವರನ್ನು ತಿಳಿದುಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ಕಲ್ಪಿಸಿಕೊಟ್ಟಂತಾಗಿದೆ ಎಂದರು.
ಶಿಕ್ಷಕ ಟಿ.ಎಂ.ಮಧು ಮಾತನಾಡಿ, ಭಾರತಕ್ಕೆ ಮಾತ್ರ ಸ್ವಾತಂತ್ರ್ಯ ತಂದುಕೊಟ್ಟಿಲ್ಲದೇ ಯುದ್ಧ ಮತ್ತು ಗುಲಾಮಗಿರಿತನವನ್ನು ಜಗತ್ತಿನಲ್ಲಿ ಇಲ್ಲದಂತೆ ಮಾಡಿದ ಗಾಂಧೀಜಿ ಇಡೀ ಜಗತ್ತನ್ನು ಹೊಸಗುರಿಯತ್ತ ಕೊಂಡೊಯ್ಯುವ ಮಾರ್ಗದರ್ಶನ ನೀಡಿದ್ದಾರೆಯೇ ಹೊರತು ಭ್ರಮಾಲೋಕದ ಪರಿಕಲ್ಪನೆಯನ್ನಲ್ಲ. ಗಾಂಧಿಯವರು ಸಾರ್ವಭೌಮ ಶಕ್ತಿಯಾಗಿದ್ದಾರೆ. ರಾಷ್ಟ್ರವನ್ನು ಸತ್ಯ, ಪ್ರೇಮಗಳ ಅಖಂಡಪ್ರಜ್ಞೆಗೆ ಎಚ್ಚರಿಸುವ ಕಾರ್ಯವನ್ನು ಗಾಂಧೀಜಿ ಮಾಡಿದರು ಎಂದರು.
ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಅವರಿಂದ ಪುಸ್ತಕ ಮತ್ತು ಚಿತ್ರಪ್ರದರ್ಶನ, ಶಿಕ್ಷಕಿ ತಾಜೂನ್ ಸಂಗಡಿಗರಿಂದ ರಾಮನಾಮ ಭಜನೆ, ವಿದ್ಯಾರ್ಥಿಗಳಿಂದ ಶಾಂತಿ, ಅಹಿಂಸೆ ಮತ್ತಿತರ ಘೋಷಣೆಗಳೊಂದಿಗೆ ಗ್ರಾಮದಲ್ಲಿ ಮೆರವಣಿಗೆ, ಶ್ರಮದಾನ ನಡೆಯಿತು. ವಿವಿಧ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಶಸ್ತಿಪತ್ರಗಳನ್ನು ವಿತರಿಸಲಾಯಿತು.
ವಿದ್ಯಾರ್ಥಿಗಳಿಗೆ ಉಚಿತವಾಗಿ ರಸ್ತೆ ಸುರಕ್ಷತೆ ನಿಯಮಗಳ ಕುರಿತ ಪುಸ್ತಕಗಳನ್ನು ವಿತರಿಸಲಾಯಿತು. ಎಸ್.ಡಿ.ಎಂ.ಸಿ ಅಧ್ಯಕ್ಷ ವೆಂಕಟೇಶ್, ಸದಸ್ಯ ಎಸ್.ಎಲ್.ನಾರಾಯಣಸ್ವಾಮಿ, ಗ್ರಾಮಪಂಚಾಯಿತಿ ಸದಸ್ಯ ಸತೀಶ್‌ಕುಮಾರ್, ಶಿವಶಂಕರಪ್ಪ, ಬೋಧಕವರ್ಗದವರು ಹಾಜರಿದ್ದರು.
ಪ್ರದರ್ಶನಗೊಂಡ ಆಕರ್ಷಕ ಪುಸ್ತಕಗಳು
ಪುಸ್ತಕಗಳ ಮತ್ತು ಚಿತ್ರ ಪ್ರದರ್ಶನವನ್ನು ಗ್ರಾಮಸ್ಥರು, ಶಾಲಾ ವಿದ್ಯಾರ್ಥಿಗಳು ವೀಕ್ಷಿಸಿ ಕಣ್ತುಂಬಿಸಿಕೊಂಡರು. ಗಾಂಧೀಜಿ ಮತ್ತು ಶಾಸ್ತ್ರೀಜಿರವರ ವಿವಿಧ ಭಾವಚಿತ್ರಗಳು, ಬ್ಯಾಡ್ಜ್ ಮತ್ತು ಸ್ಟಾಂಪ್‌ಗಳು, ಗಾಂಧಿಭವನ ಪ್ರಕಟಿತ ಬಾಪೂಪ್ರಪಂಚ, ಗಾಂಧೀಜಿ ಆನ್ ಕನ್ವರ್ಶನ್, ಗಣ್ಯರು ಕಂಡಂತೆ ಗಾಂಧೀಜಿ, ಗಾಂಧೀ ಗೀತೆಗಳು, ರಾಮನಾಮ, ಗಾಂಧೀ ಇನ್ ಬೆಂಗಳೂರು, ಮಹಾತ್ಮಗಾಂಧಿ ಮತ್ತು ಸ್ವಚ್ಚತೆ, ನಂದಿಗಿರಿಧಾಮದಲ್ಲಿ ಗಾಂಧಿ, ನನ್ನ ಸತ್ಯಾನ್ವೇಷಣೆ, ಗಾಂಧಿರೇಖಾ ಚಿತ್ರ ದರ್ಶನ, ಮಹಾತ್ಮಗಾಂಧಿ ಕೃತಿಸಂಚಯ ವಿವಿಧ ಸಂಪುಟಗಳು, ಗಾಂಧಿ ಮತ್ತು ಕರ್ನಾಟಕ, ನನ್ನ ಮನಸಿನ ಭಾರತ,ಮಹಾತ್ಮರ ಬಾಳು, ಬಹುರೂಪಿಗಾಂಧಿ, ಮತ್ತಿತರ ಹಲವಾರು ಪುಸ್ತಕಗಳು ಆಕರ್ಷಕವಾಗಿದ್ದವು.