Sidlaghatta : ಶಿಡ್ಲಘಟ್ಟ ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಆಶೀರ್ವಚನ ಕಾರ್ಯಕ್ರಮದಲ್ಲಿ ಶೃಂಗೇರಿ ಶಾರದಾಪೀಠದ ವಿಧುಶೇಖರ ಭಾರತಿ ಸ್ವಾಮೀಜಿ (Sri Sringeri Sharada Peetham Sri Vidhushekara Bharati Swamiji) ಅವರು ಮಾತನಾಡಿದರು.
ಸುಮಾರು ಅರವತ್ತು ವರ್ಷಗಳ ಹಿಂದೆ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ, ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ 35 ನೇ ಗುರುಗಳಾದ ಅಭಿನವ ವಿದ್ಯಾರ್ಥಿ ಮಹಾಸ್ವಾಮಿಗಳು ಶೃಂಗೇರಿಯಿಂದ ಒಂದು ದೊಡ್ಡ ವಿಜಯ ಯಾತ್ರೆಯನ್ನು ಕೈಗೊಂಡಿದ್ದರು. 1956 ರಿಂದ 1962 ರ ವರೆಗೆ ಆರು ವರ್ಷಗಳ ಕಾಲ ನಡೆದ ದೊಡ್ಡ ವಿಜಯಯಾತ್ರೆಯಲ್ಲಿ ಶಿಡ್ಲಘಟ್ಟಕ್ಕೂ ಆಗಮಿಸಿದ್ದರು. ಆ ಸಂದರ್ಭದಲ್ಲಿ ಇಲ್ಲಿ ವಾಸ್ತವ್ಯ ಹೂಡಿ ಶಾರದಾ ಚಂದ್ರಮೌಳೇಶ್ವರ ಪೂಜೆ ಮಾಡಿ ಎಲ್ಲರಿಗೂ ಆಶೀರ್ವದಿಸಿದ್ದರು. 60 ವರ್ಷಗಳ ನಂತರ ಇದೀಗ ದೈವಾನುಗ್ರಹದಿಂದ ನಾವು ಬರುವಂತಾಗಿದೆ. ಗುರುಭಕ್ತಿ, ಧರ್ಮಶ್ರದ್ಧೆ, ಭಗವದ್ಭಕ್ತಿ ಮತ್ತು ಧರ್ಮನಿಷ್ಠೆ ಕೂಡಿದ್ದಲ್ಲಿ ಸನ್ಮಾರ್ಗಕ್ಕೆ ದಾರಿಯಾಗುತ್ತದೆ ಎಂದರು.
ಶಂಕರಾಚಾರ್ಯರು ನಮ್ಮ ಸನಾತನ ಧರ್ಮವನ್ನು ಉದ್ಧರಿಸಿದ್ದರಿಂದ ಇವತ್ತಿನ ದಿವಸ ಎಲ್ಲರೂ ಸಹ ಈ ಧರ್ಮವನ್ನು ಆಚರಣೆ ಮಾಡಲು ಸಾಧ್ಯವಾಗುತ್ತಿದೆ. ಅವರ ಅವತಾರ ಆಗಿರದಿದ್ದಿದ್ದರೆ ಈ ಉತ್ತಮ ಸನಾತನ ಸಂಸ್ಕೃತಿಯನ್ನು ನಾವು ನೋಡುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಶಂಕರಾಚಾರ್ಯರು ಸನಾತನ ಧರ್ಮವನ್ನು ಉದ್ಧರಿಸಲು ಅವತಾರ ಎತ್ತಿದವರು. ಅವರು ಪರಮೇಶ್ವರನ ಅವತಾರ. ಅವರು ತೋರಿದ ಮಾರ್ಗದಲ್ಲಿ ನಾವು ನಡೆಯಬೇಕು. ಆತ್ಯಂತಿಕ ದುಃಖದ ನಾಶವೇ ಮುಕ್ತಿ ಅಥವಾ ಮೋಕ್ಷ. ಶಂಕರಾಚಾರ್ಯರು ಪ್ರಮುಖವಾಗಿ ಜ್ಞಾನ ಮಾರ್ಗವನ್ನು ಉಪದೇಶಿಸಿದ್ದಾರೆ ಎಂದರು.
ಶ್ರೀ ಶಂಕರ ಸೇವಾ ಟ್ರಸ್ಟ್, ತಾಲ್ಲೂಕು ಬ್ರಾಹ್ಮಣ ಮಹಾಸಭಾ, ತಾಲ್ಲೂಕು ಬ್ರಾಹ್ಮಣ ಯುವಕ ಸಂಘ, ಗಾಯತ್ರಿ ಮಹಿಳಾ ಮಂಡಳಿ, ವಿಪ್ರ ಪ್ರತಿಭಾ ಪುರಸ್ಕಾರ ಹಾಗೂ ಸೇವಾ ಟ್ರಸ್ಟ್ ಸದಸ್ಯರು ಹಾಜರಿದ್ದರು.