
Abludu, sidlaghatta : ಶಿಡ್ಲಘಟ್ಟ ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರದನಾಯಕನಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ಪಟಾಲಮ್ಮದೇವಿ ಮತ್ತು ಶ್ರೀ ವೀರಸೊಣ್ಣಮ್ಮ ದೇವಿಯ 29ನೇ ವರ್ಷದ ರಥೋತ್ಸವ ಹಾಗೂ ಕಾಯಿ ಉಟ್ಲು ಮಹೋತ್ಸವವು ಮಂಗಳವಾರ ಭಕ್ತಿ ಹಾಗೂ ಉತ್ಸಾಹಭರಿತವಾಗಿ ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ದೇವಾಲಯದಲ್ಲಿ ವಿಶೇಷ ಹೂವಿನ ಅಲಂಕಾರದಿಂದ ದೇವಿಯ ವಿಗ್ರಹಗಳನ್ನು ಶೃಂಗಾರಿಸಿ ಮಹಾ ಮಂಗಳಾರತಿ ಸಲ್ಲಿಸಲಾಯಿತು. ಆಗಮಿಸಿದ್ದ ಭಕ್ತರಿಗೆ ತೀರ್ಥ ಹಾಗೂ ಪ್ರಸಾದ ವಿತರಣೆ ಮಾಡಲಾಯಿತು. ನಂತರ ನಾದಸ್ವರ ಮಂಗಳವಾದ್ಯಗಳೊಂದಿಗೆ ಉತ್ಸವ ಮೂರ್ತಿಗಳನ್ನು ಅಲಂಕೃತ ತೇರಿನಲ್ಲಿ ಆರೋಹಿಸಿ ದೇವಾಲಯದ ಸುತ್ತಲೂ ಭಕ್ತರ ಪಾಲಿಗೆ ಪ್ರದಕ್ಷಿಣೆ ಹಮ್ಮಿಕೊಳ್ಳಲಾಯಿತು. ಎಲ್ಲಾ ವಯಸ್ಸಿನ ಗ್ರಾಮಸ್ಥರು ತೇರನ್ನು ಎಳೆದರೆ, ಕೆಲವರು ತೇರಿನ ತುದಿಯ ಕಳಶಕ್ಕೆ ಬಾಳೆ ಹಣ್ಣು ಎಸೆದು ತಮ್ಮ ಇಷ್ಟಾರ್ಥಗಳ ಪೂರಣಕ್ಕಾಗಿ ತಾಯಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಗ್ರಾಮದ ಮುಖ್ಯ ರಸ್ತೆಯಲ್ಲಿ ಸಾಗಿದ ರಥಕ್ಕೆ ಜನಪದ ಕಲಾ ತಂಡಗಳಾದ ಕೀಲುಕುದುರೆ, ಗಾರುಡಿ ಗೊಂಬೆ, ಮರದ ಕಾಲುಗಳ ಮೇಲಿಂದ ನಡೆಯುವ ವೇಷಧಾರಿಗಳ ಪ್ರದರ್ಶನ ವಿಶೇಷ ಆಕರ್ಷಣೆಯಾಯಿತು. ದೇವಾಲಯದ ಪರಿಸರದಲ್ಲಿ ಜಾತ್ರೆಯ ವಾತಾವರಣ ಕಾಣಿಸಿತ್ತು. ಮಕ್ಕಳ ಆಟಿಕೆ, ಸೌಂದರ್ಯವರ್ಧಕ ಸಾಮಗ್ರಿಗಳ ಅಂಗಡಿಗಳು, ಐಸ್ ಕ್ರೀಂ, ಎಳನೀರು, ತಂಪು ಪಾನೀಯ, ಕಲ್ಲಂಗಡಿ ಹಣ್ಣುಗಳ ವ್ಯಾಪಾರ ಜೋರಾಗಿ ನಡೆದವು.
ಭಕ್ತರಿಗೆ ಉಚಿತ ಅನ್ನಸಂತರ್ಪಣೆ ಮತ್ತು ಪ್ರಸಾದ ವಿನಿಯೋಗ ವ್ಯವಸ್ಥೆ ಮಾಡಲಾಗಿತ್ತು. ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಭಕ್ತರು ಪಾಲ್ಗೊಂಡು ಎತ್ತಿನ ಬಂಡಿಗಳಲ್ಲಿ ಪಾನಕ, ಮಜ್ಜಿಗೆ ಹಾಗೂ ಹೆಸರುಬೇಳೆ ತಂದು ಭಕ್ತರಿಗೆ ಪ್ರಸಾದವಾಗಿ ಹಂಚಿದರು.
ಸಂಜೆಯ ವೇಳೆಗೆ ದೇವಿಯಲ್ಲಿ ಕ್ಷೀರ ಉಟ್ಲು ಹಾಗೂ ಕಾಯಿ ಉಟ್ಲು ಮಹೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು. ಈ ಧಾರ್ಮಿಕ ಉತ್ಸವದಲ್ಲಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಸದಸ್ಯರು ಮತ್ತು ವಿವಿಧ ಗ್ರಾಮಗಳ ಮುಖಂಡರು ಸಕ್ರಿಯವಾಗಿ ಪಾಲ್ಗೊಂಡಿದ್ದರು.