Varadanayakanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ವರದನಾಯಕನಹಳ್ಳಿ ಗ್ರಾಮದಲ್ಲಿ ಶ್ರೀ ಪಟಾಲಮ್ಮದೇವಿ ಮತ್ತು ಶ್ರೀ ವೀರಸೊಣ್ಣಮ್ಮದೇವಿಯವರ 28ನೇ ವರ್ಷದ ರಥೋತ್ಸವ ಮತ್ತು ಉಟ್ಲು ಮಹೋತ್ಸವ ಶುಕ್ರವಾರ ನಡೆಯಿತು.
ಮಂಗಳ ವಾದ್ಯಗಳೊಂದಿಗೆ ರಥವನ್ನು ಗ್ರಾಮಸ್ಥರು, ಹೆಂಗಸರು, ಮಕ್ಕಳು, ಹಿರಿಯರು, ಕಿರಿಯರು ಎಂಬ ಭೇದವಿಲ್ಲದೆ ಎಳೆದರು. ಗ್ರಾಮದ ಮುಖ್ಯ ರಸ್ತೆಯಲ್ಲಿ ಸಾಗಿ ರಥವು ದೇವಾಲಯದ ಬಳಿಗೆ ಸಾಗಿತು. ರಥೋತ್ಸವದಲ್ಲಿ ಕೀಲುಕುದುರೆ, ಗಾರ್ಡಿಬೊಂಬೆ, ಮರದ ಕಾಲು ಕಟ್ಟಿಕೊಂಡು ನಡೆಯುವ ವೇಷಧಾರಿಗಳು ಗಮನಸೆಳೆದರು. ದೇವಾಲಯದ ಬಳಿ ಬತ್ತಾಸು, ಬುರುಗು, ಖಾರ, ಬಳೆ, ಪಾತ್ರೆ, ಆಟದ ಸಾಮಾನುಗಳು, ತಿಂಡಿ ತಿನಿಸುಗಳು, ಎಳೆನೀರು, ಹಣ್ಣಿನ ಅಂಗಡಿಗಳು, ಪಾನೀಯಗಳು ಇತ್ಯಾದಿ ಮಾರುವ ವಿವಿಧ ಅಂಗಡಿಗಳು ಜನರನ್ನು ಆಕರ್ಷಿಸುತ್ತಿದ್ದವು. ದೇವಾಲಯದಲ್ಲಿ ಪ್ರಸಾದ ವಿನಿಯೋಗ ಹಾಗೂ ದೇವಾಲಯದ ಆವರಣದಲ್ಲಿ ಉಚಿತ ಅನ್ನಸಂತರ್ಪಣೆ ವ್ಯವಸ್ಥೆ ಮಾಡಿದ್ದರು. ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಜನರು ಆಗಮಿಸಿದ್ದರು. ಸುತ್ತಲಿನ ಗ್ರಾಮಸ್ಥರು ಪಾನಕ ಬಂಡಿಗಳನ್ನು ತಂದು ಬಿಸಿಲಲ್ಲಿ ಸುಸ್ತಾದವರಿಗೆಲ್ಲ ಪಾನಕ ಮತ್ತು ಹೆಸರುಬೇಳೆ ಉಚಿತವಾಗಿ ವಿತರಿಸುತ್ತಿದ್ದರು.
ಸಂಜೆ ಅಮ್ಮನವರ ಕ್ಷೀರ ಉಟ್ಲು ಮತ್ತು ಕಾಯಿ ಉಟ್ಲು ಮಹೋತ್ಸವ ನಡೆಯಿತು. ಶ್ರೀ ಪಟಾಲಮ್ಮದೇವಿ ಮತ್ತು ಶ್ರೀ ವೀರಸೊಣ್ಣಮ್ಮದೇವಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಸದಸ್ಯರು ವಿವಿಧ ಗ್ರಾಮಗಳ ಮುಖಂಡರು ಹಾಜರಿದ್ದರು.